ತುಂಬ ಒರಟು ಕಣೇ ನೀನು ಎನ್ನುತ್ತಿರುತ್ತಾಳೆ ನ್ಯಾನ್ಸಿ. ಹೌದು ಕಣೆ, ನಾನಿರೋದೇ ಹೀಗೆ ಎಂದು ಹುಬ್ಬು ಹಾರಿಸಿ ಅವಳಿಗೆ ಉತ್ತರಿಸುತ್ತಿರುತ್ತೇನೆ. ಒಳಗೆ ಕುದಿವ ಲಾವಾರಸ. ಅದರ ಶಾಖಕ್ಕೆ ನಿಗಿನಿಗಿ ಕಾದು, ಎದೆಯ ಕವಾಟಗಳೆಲ್ಲ ನೀರಾಗಿ ಹರಿಯುತ್ತಿದ್ದರೂ ಹೊರಜಗತ್ತಿಗೆ ನಾನು ಒರಟಾಗಿಯೇ ಕಾಣುತ್ತೇನೆ. ಮೂಗು-ಮೂತಿ ನೀಟಾಗಿ, ಮೈ ಬಣ್ಣ ಬಿಳಿಯಾಗಿ ಇರುವುದಕ್ಕೆ ನನ್ನ ಸುತ್ತ ಯಾವಾಗಲೂ ಜನ ಜನ. ಎಳವೆಯಲ್ಲಿ ನನ್ನನ್ನು ಎತ್ತಿದವರೆಷ್ಟೋ, ಮುದ್ದಿಸಿದವರೆಷ್ಟೋ... ಹರೆಯದಲ್ಲಿ ನಡೆದದ್ದೆಲ್ಲ ಹುಡುಗರ ಪರೇಡು. ಅವರ ಕಣ್ಣುಗಳೆದುರು ನಾನು ಬಣ್ಣದ ಚಿಟ್ಟೆ. ಅವರ ಬೆನ್ನ ಹುರಿಯಲ್ಲಿ ಎದ್ದು ನಿಲ್ಲುವ ಮಿಂಚು. ಅವರ ರಾತ್ರಿ ಕನಸಿನಲ್ಲಿ ಒಂದೊಂದಾಗಿ ಬಟ್ಟೆ ಕಳಚಿಕೊಂಡು ಬೆತ್ತಲಾಗುವ ಮಾಯಾಕನ್ಯೆ. ಒರಟಳಾಗದೆ ಅಥವಾ ಒರಟಳಂತೆ ತೋರಿಸಿಕೊಳ್ಳದೆ ನಾನೇನು ಮಾಡಬಹುದಿತ್ತು?
ಅವನು ಬಂದ. ಬಂದ ಮೇಲೆ ನಾನು ನಾನಾಗಿ ಉಳಿಯಲಿಲ್ಲ. ಅವನೂ ಬೇರೆಯವರಂತೆಯೇ ಎಂದು ಭಾವಿಸಿದ್ದೆ. ಅವನು ನನ್ನ ಭಾವವನ್ನೂ ಬದಲಿಸಿದ, ಬದುಕನ್ನೂ ಬದಲಿಸಿದ. ಬದಲಾದ ನನ್ನೊಳಗೆ ಅವನು ಇಳಿಯುತ್ತಲೇ ಹೋದ, ಇಳಿದು ಇಳಿದು ನನ್ನ ಕೈಗೇ ಎಟುಕಲಾರದಷ್ಟು ಆಳಕ್ಕೆ ಸರಿದು ಹೋದ.
ಅವನು ಸಂಕೇತ. ನನ್ನ ಬಳಿ ಬಂದಾಗ ಅವನನ್ನೂ ಸುಡುಸುಡು ದೃಷ್ಟಿಯಿಂದಲೇ ಅವನನ್ನು ಬೆದರಿಸಿದ್ದೆ. ಅವನು ನನ್ನ ಎದೆಯ ಕಾವನ್ನು ತಾಳಿಕೊಂಡ. ಅವನು ನನ್ನನ್ನು ತಾಳಿಕೊಂಡಷ್ಟು ಮತ್ತಷ್ಟು ಒರಟಾಗುತ್ತ ಬಂದೆ. ಅವನು ಬದಲಾಗಲೇ ಇಲ್ಲ. ನನ್ನೆದುರು ಮಂಡಿಯೂರಿ ನಿಂತ ಅವನ ಭಾವಭಂಗಿಯಲ್ಲಿ ಕಿಂಚಿತ್ತೂ ಊನವಾಗಲೇ ಇಲ್ಲ.
ಏನವನು ನನ್ನ ದೇಹ ಬಯಸಿದ್ದನೆ? ಇದೇ ಪ್ರಶ್ನೆ ಇಟ್ಟುಕೊಂಡು ಅವನನ್ನು ಪರೀಕ್ಷೆಯ ಮೇಲೆ ಪರೀಕ್ಷೆಗೆ ಒಡ್ಡಿದೆ. ಎಲ್ಲದರಲ್ಲೂ ಅವನು ಪಾಸೋಪಾಸು. ನನ್ನ ಮನಸ್ಸು ಬಯಸಿದ್ದನೆ? ಹೌದು, ಮನಸ್ಸು ಎಂಬುದೇ ಅಮೂರ್ತವಲ್ಲವೆ? ಅದನ್ನು ಬಯಸುವುದಾದರೂ ಹೇಗೆ? ಅದನ್ನು ಗಿಟ್ಟಿಸುವುದಾದರೂ ಹೇಗೆ? ಆ ಪ್ರಶ್ನೆಗಳಿಗೇ ಉತ್ತರವಿರಲಿಲ್ಲ.
ಅವನು ನನ್ನ ಸ್ನೇಹಿತನೆ? ಅಣ್ಣನೆ? ತಂದೆಯೇ? ತಾಯಿಯೇ? ಯಾವ ಸಂಬಂಧದ ಹಣೆಪಟ್ಟಿ ಹಂಚಲಿ? ಇದೆಲ್ಲವೂ ಆಗಿ, ಅವನು ನನ್ನ ಮಡಿಲ ಮಗುವಾಗಿಯೇ ನಿಟ್ಟುಸಿರು ಬಿಡುತ್ತಿದ್ದುದು ಸತ್ಯವಲ್ಲವೆ?
``ರಮಿ, ಪ್ರೀತಿ ನಿರಪೇಕ್ಷ ಕಣೆ, ನೀನು ನನ್ನನ್ನು ಮದುವೆಯಾಗಲೇಬೇಕು ಎಂಬ ನಿರೀಕ್ಷೆಗಳೇನೂ ಇಲ್ಲ. ನಿನ್ನೆದೆಯಲ್ಲೊಂದಿಷ್ಟು ಜಾಗ ಮಾಡಿಕೊಡು ಸಾಕು. ನಿನ್ನ ನೆನಪುಗಳ ಜತೆ ಬದುಕುತ್ತೇನೆ. ನಿತ್ಯವೂ ನನ್ನೊಂದಿಗೆ ಮಾತಾಡಬೇಕು ಎಂದೇನೂ ಇಲ್ಲ. ನಕ್ಷತ್ರಗಳ ಮೂಲಕ ಸಂದೇಶ ಕಳಿಸುತ್ತೇನೆ. ಅಥವಾ ಮತ್ತೆ ಹೇಗೋ ಮಾತಾಡುತ್ತಿರುತ್ತೇನೆ.''
ಹೀಗೆ ಅವನು ಮಾತನಾಡುತ್ತಿದ್ದಾಗಲೆಲ್ಲ ನಕ್ಕು ಸುಮ್ಮನಾಗುತ್ತಿದ್ದೆ. ಆದರೆ ಆ ಮಾತುಗಳೆಲ್ಲ ನನ್ನ ಎದೆಯೊಳಗೆ ಉಳಿದು ಹೋಗಿದ್ದು ಅರಿವೇ ಆಗಲಿಲ್ಲ. ಯಾಕೆಂದರೆ ಅವನು ಅಷ್ಟು ಪ್ರಾಮಾಣಿಕವಾಗಿ ಅಷ್ಟೆಲ್ಲ ಮಾತುಗಳನ್ನು ಆಡುತ್ತಿದ್ದ.
ಹೀಗಿದ್ದೂ ಅವನನ್ನು ನಾನು ಅನುಕ್ಷಣವೂ ತಿರಸ್ಕರಿಸುತ್ತಲೇ ಬಂದೆ. ಅದು ನನ್ನ ಬುದ್ಧಿಪೂರ್ವಕವಾದ ನಿರ್ಧಾರವಾಗಿತ್ತು. ನಾನಿದ್ದ ಪರಿಸ್ಥಿತಿಯಲ್ಲಿ ಅದು ನನಗೆ ಅನಿವಾರ್ಯವೂ ಆಗಿತ್ತು ಎಂದೇ ನಾನು ಭಾವಿಸಿದ್ದೆ. ದಿನಕ್ಕೊಂದು ಕವಿತೆ ಹೊಸೆದು ಭ್ರಮೆಯ ಲೋಕದಲ್ಲಿ ಬದುಕುವವನೊಂದಿಗೆ ಬದುಕಿಡೀ ಹೆಣಗುವುದು ನನ್ನ ಪಾಲಿಗಂತೂ ಅಸಾಧ್ಯವಾಗಿತ್ತು. ನನ್ನ ತಿರಸ್ಕಾರಗಳನ್ನೂ ಅವನು ಅದೆಷ್ಟು ವಿನೀತನಾಗಿ ಸ್ವೀಕರಿಸುತ್ತಿದ್ದನೆಂದರೆ ನನ್ನ ಅಸ್ತಿತ್ವವೇ ಅಲುಗಾಡಿ, ಯಾವುದೋ ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿ ಹೋಗುತ್ತಿದ್ದೆ.
ಕಟ್ಟಕಡೆಗೆ ಅವನಿಗೂ ನನಗೂ ಅಗ್ನಿಪರೀಕ್ಷೆಯ ಕಾಲವೂ ಎದುರಾಗಿತ್ತು. ಅವನನ್ನು ಕಡೆಯ ಬಾರಿಗೆ ಪರೀಕ್ಷೆಗೆ ಒಡ್ಡಲು ನಾನು ತೀರ್ಮಾನಿಸಿದ್ದೆ. ಈ ಪರೀಕ್ಷೆ ಇಬ್ಬರ ನಡುವಿನ ಸಂಬಂಧದ ಕಡೆಯ ಚರಣವೂ ಆಗಿತ್ತು.
``ಸಂಕೇತ್, ನೀನೇ ಹೇಳ್ತಾ ಇದ್ದೆಯಲ್ಲ, ಪ್ರೀತಿ ನಿರಪೇಕ್ಷಕ, ಮದುವೆಯಾಗದೆಯೂ ನಾವು ಪ್ರೀತಿಸುತ್ತ ಇರಬಹುದು ಎಂದು. ಇವತ್ತು ಕೊನೆ. ಇನ್ನು ನಾವು ಭೇಟಿಯಾಗುವುದು ಬೇಡ. ನಾಳೆಯಿಂದ ನಿನ್ನದೊಂದು ಬದುಕು, ನನ್ನದೊಂದು ಬದುಕು. ಮನಸ್ಸಿನೊಳಗೆ ವಿಷಾದ ಬೇಡ. ಎಲ್ಲ ಸಂಬಂಧಗಳೂ ಸಾಯುವವರೆಗೆ ಬೆಸೆದುಕೊಂಡೇ ಇರಬೇಕು ಎಂದು ಬಯಸುವುದೂ ಸರಿಯಲ್ಲ. ಇಲ್ಲಿಗೆ ಇದೆಲ್ಲ ಮುಗಿಸಿಬಿಡೋಣ.''
ಅದೆಷ್ಟು ಗಟ್ಟಿ ಮನಸ್ಸು ಮಾಡಿ ಇದನ್ನು ಹೇಳಿದ್ದೆನೋ? ಅವನು ಏನೊಂದೂ ಮಾತನಾಡಲಿಲ್ಲ. ಒಮ್ಮೆ ನನ್ನ ಹೆರಳ ಮೇಲೆ ಕೈಯಾಡಿಸಿ, ನಕ್ಕು ಅಲ್ಲಿಂದ ಮರೆಯಾಗಿ ಹೋದ. ಹಾಗೆ ಹೋದವನು ಮತ್ತೆಂದೂ ಬರಲಿಲ್ಲ. ಅವನು ಹೋದ ಮೇಲೂ ನನ್ನೊಳಗೆ ಇಳಿದುಹೋದ ಅವನನ್ನು ಹುಡುಕಿಕೊಳ್ಳಲು ಯತ್ನಿಸಿದ್ದುಂಟು. ಆದರೆ ಅವನು ನನ್ನ ಕೈಗೆ ಸಿಗಲಾರದಷ್ಟು ಆಳಕ್ಕೆ ಸರಿದು ಹೋಗಿದ್ದ.
*****
ಹೊರಗೆ ಜಿಟಿಪಿಟಿ ಮಳೆ, ಆಗಾಗ ಭೋರ್ಗೆರೆಯುವ ಗಾಳಿ. ಕಣ್ಣಿಂದ ನೀರು ತಾನೇ ತಾನಾಗಿ ಹರಿದು ಹೋಗುತ್ತಿದೆ. ಮಗ್ಗುಲಲ್ಲಿ ಮಲಗಿದ ಜಿತು ತೋಳ ಮೇಲೆ ಹನಿ ಬಿದ್ದಿರಬೇಕು. ಅವನು ಎದ್ದ. ಎದ್ದವನೇ ನನ್ನ ಕಣ್ಣಿರು ಒರೆಸಿ ಏನಾಯ್ತು ಮಗಳೇ ಎಂದ. ಗಂಡನಾದರೂ ಅವನು ಆಗಾಗ ಮಗಳೇ ಎನ್ನುತ್ತಾನೆ. ಅವನ ಮಡಿಲಲ್ಲಿ ನಾನು ಮಗುವೇ ಹೌದು.
``ಅವನನ್ನು ನೋಡಬೇಕು'' ಎಂದೆ.
``ಯಾರು, ಏನು?'' ಎಲ್ಲ ವಿಚಾರಿಸಿಕೊಂಡ.
ಎಲ್ಲವನ್ನೂ ಹೇಳಿಕೊಂಡೆ.
``ಒಂದು ಫೋನ್ ಮಾಡು, ಎಲ್ಲಿದ್ದರೂ ನಾಳೆ ಒಮ್ಮೆ ಬಂದು ಹೋಗಲು ಹೇಳು'' ಎಂದ.
``ಆಯ್ತು.. ಥ್ಯಾಂಕ್ಸ್ ಕಣೋ'' ಎಂದವಳೇ ಮಗ್ಗುಲಲ್ಲಿ ಕೈಯಾಡಿಸಿದೆ. ಕಳೆದ ಮೂರು ದಿನಗಳಿಂದಲೂ ಅದು ಅಭ್ಯಾಸವಾಗಿ ಹೋಗಿದೆ.
ಆದರೇನು ಮಾಡಲಿ, ಮಗ್ಗುಲಲ್ಲಿ ಮಗುವಿರಲಿಲ್ಲ. ಮೊನ್ನೆಯಷ್ಟೆ ತೀರಿಕೊಂಡಳಲ್ಲ ಆ ಪುಟ್ಟ ಕಂದಮ್ಮ. ಎದೆಯಲ್ಲಿ ತೊಟ್ಟಿಕ್ಕುವ ಹಾಲು. ಕುಡಿಯಬೇಕಾದವಳು ಹುಟ್ಟಿದ ಒಂದೇ ದಿನಕ್ಕೆ ಮಣ್ಣಾಗಿ ಹೋದಳು. ಅವಳನ್ನು ಎಲ್ಲಿ ಹುಡುಕುವುದು?
ಮತ್ತೆ ಕಣ್ಣಲ್ಲಿ ನೀರಿನ ಧಾರೆ. ಕಣ್ಣು, ಕೆನ್ನೆ, ಎದೆ, ತೋಳೆಲ್ಲ ನೆನೆನೆನೆದು ಹೋಗಿದ್ದವು. ಜಿತುವಿನ ಕಣ್ಣುಗಳೂ ಜಿನುಗುಟ್ಟುತ್ತಿದ್ದವು.
``ಅಳಬೇಡ ಕಣೇ, ಈಗ ಮಲಗು, ನಾನಿದ್ದೇನೆ'' ಎಂದು ಹೇಳಿ ತೋಳಮೇಲೆ ಎಳೆದುಕೊಂಡು ಮಲಗಿಸಿಕೊಂಡ. ಅವನ ತೋಳ ಶಕ್ತಿಯೇ ಅಂಥದ್ದು. ಎಲ್ಲ ನೋವನ್ನು ನೀಗಿಸುವಂಥದ್ದು. ಆದರೂ ನಿದ್ದೆ ಬರುತ್ತಲೇ ಇಲ್ಲ.
ನಾಳೆ ಬರುವ ಅವನು ನನಗೆ ಸಾಂತ್ವನವಾಗುವನೆ? ಅವನ ಕಣ್ಣೊಳಗೆ ಕಳೆದು ಹೋದ ನನ್ನ ಮಗಳು ದಕ್ಕುವಳೇ?
ಗೊತ್ತಿಲ್ಲ.