Friday, October 24, 2008

ನನ್ನ ಅಹಂಕಾರ ತುಳಿದವನ ಬೆನ್ನ ಹಿಂದೆ ಹೊರಟು...

ಕುದೀತಾನೇ ಇದೀನಿ. ನೆತ್ತಿಯಿಂದ ಹಿಡಿದು ಅಂಗಾಲಿನವರೆಗೆ ಇದೆಂಥದೋ ನಡುಕ. ಕಣ್ಣ ರೆಪ್ಪೆ, ತುಟಿಗಳೆಲ್ಲ ಅದುರುತ್ತಲೇ ಇವೆ. ಕಿಬ್ಬೊಟ್ಟೆಯಾಳದಿಂದ ಎದ್ದು ನಿಲ್ಲುವ ಸಂಕಟ. ಪದೇಪದೇ ದಾಹ. ಎಷ್ಟು ನೀರು ಕುಡಿದರೂ ಇಂಗದ ದಾಹ.ಇದೆಂಥ ಬೇಗೆ ಅರ್ಥವಾಗ್ತಾ ಇಲ್ಲ. ಅವನು ನನ್ನ ಅಹಂಕಾರಕ್ಕೇ ದೊಡ್ಡ ಪೆಟ್ಟು ಕೊಟ್ಟ ಅನಿಸುತ್ತದೆ. ಅಷ್ಟಕ್ಕೂ ಅವನು ಆಡಿದ ಮಾತಾದರೂ ಏನು? ಅವನೇನು ನನ್ನನ್ನು ನಿಂದಿಸಲಿಲ್ಲ, ಕೆಡುಕು ಮಾತನ್ನೇನೂ ಆಡಲಿಲ್ಲ. ಆತ್ಮೀಯತೆಯಿಂದಲೇ ಮಾತನಾಡಿಸಿದ. ಕಾಫಿ ಕುಡಿಸಿದ. ನನ್ನ ಪ್ರಶ್ನೆಗೆ ನಿಖರವಾಗಿ ಉತ್ತರಿಸಿದ. ಅವನ ಉತ್ತರವೇ ನನ್ನನ್ನು ಇಷ್ಟು ಯಾತನೆಗೆ ತಳ್ಳಬೇಕೇ? ಒಂದೂ ಅರ್ಥವಾಗುತ್ತಿಲ್ಲ.
ಈಗಷ್ಟೆ ಪಕ್ಕದ ಅಪಾರ್ಟ್‌ಮೆಂಟ್‌ನ ಸಬೀನಾ ಬಂದುಹೋದಳು. ರಾಜಸ್ತಾನಿ ಹೆಣ್ಣುಮಗಳು. ಊರಿಗೆ ಹೋಗಿದ್ದವಳು ನಿನ್ನೆಯಷ್ಟೆ ವಾಪಾಸು ಬಂದಿದ್ದಾಳೆ. ಅವಳಿಗೆ ಅಲ್ಲಿನ ವಿಷಯವನ್ನೆಲ್ಲ ಹೇಳುವ ಧಾವಂತ. ಆಮೇಲೆ ಮಾತಾಡೋಣ ಅಂತ ಹೊರಗಟ್ಟಿದೆ. ಅವಳ ಬಳಿ ನನ್ನ ಸಂಕಟ ತೋರಿಸಿಕೊಳ್ಳಲಿಲ್ಲ. ತುಂಬ ಖುಷಿಯಾಗಿದ್ದೇನೆ, ಸ್ವಲ್ಪ ಕಾಲ ನನ್ನನ್ನು ನನ್ನ ಪಾಡಿಗೆ ಒಬ್ಬಳೇ ಇರಲು ಬಿಡು ಎಂದೆ. ಅದೂ ಸಹ ನನ್ನ ಅಹಂಕಾರದ ಕ್ರಿಯೆಯೇ ಆಗಿತ್ತಲ್ವಾ? ತುಂಬಾ ನೋವಾದಾಗಲೂ ನಾನೇಕೆ ಖುಷಿಯಾಗಿರುವಂತೆ ನಟಿಸಬೇಕು? ಯಾಕೆ ಈ ಮುಖವಾಡದ ಬದುಕು?
ಅವನು ಮಾತ್ರ ಯಾವತ್ತೂ ಮುಖವಾಡಗಳನ್ನಿಟ್ಟುಕೊಂಡು ನನ್ನ ಬಳಿಗೆ ಬಂದವನಲ್ಲ. ಸುಖಾಸುಮ್ಮನೆ ನನ್ನನ್ನು ಪ್ರೀತಿಸಿದವನೂ ಅಲ್ಲ. ಅವನು ನನ್ನನ್ನು ಪ್ರೀತಿಸುವಂತೆ ಸೆಳೆದವಳು ನಾನೇ ಎಂಬುದು ನನಗೂ ಗೊತ್ತು, ಅವನಿಗೂ ಗೊತ್ತು.ನಾನು ಕಾಲೇಜು ಓದುವಾಗ ಪರಿಚಯವಾದವನು ಅವನು. ಬುದ್ಧಿವಂತ ಹುಡುಗ. ಬಹುಶಃ ನನಗಿಂತ ಬುದ್ಧಿವಂತ. ಬೇರೆ ಹುಡುಗರೆಲ್ಲ ನನ್ನ ಕಡೆ ವಿಶೇಷ ಸೆಳೆತ ಇಟ್ಟುಕೊಂಡಿದ್ದರೂ ಇವನು ಮಾತ್ರ ತನ್ನ ಪಾಡಿಗೆ ತಾನಿದ್ದ. ಅವನನ್ನು ಸೆಳೆಯದೇ ಹೋದನಲ್ಲ ಎಂಬ ಕೊರಗು ಒಳಗೊಳಗೆ ಕಾಡತೊಡಗಿತ್ತು. ಅದನ್ನು ಕೊರಗು ಎನ್ನುವುದೋ ಸ್ವಾರ್ಥ ಎನ್ನುವುದೋ? ನಿಧಾನವಾಗಿ ಅವನನ್ನು ಸಮೀಪಿಸಿದೆ. ಹುಡುಗಿಯರ ಜಗತ್ತಿನ ಕುರಿತು ಏನೇನೂ ಗೊತ್ತಿಲ್ಲದ ಅಮಾಯಕ ಅವನು. ನಾನು ಹತ್ತಿರವಾದಂತೆ ಗರಿಗೆದರತೊಡಗಿದ. ದಿನದಿಂದ ದಿನಕ್ಕೆ ತೆರೆದುಕೊಳ್ಳುತ್ತ ಹೋದ. ನನ್ನ ಹೊರತಾಗಿ ಇನ್ನೊಂದು ಜಗತ್ತೇ ಇಲ್ಲವೇನೋ ಅನ್ನುವಷ್ಟು ಆವರಿಸಿಕೊಳ್ಳತೊಡಗಿದೆ.
ಅಷ್ಟು ಸಾಕಾಗಿತ್ತು ನನಗೆ. ಇಷ್ಟೊಂದು ಪ್ರೀತಿಸುವವರು ಎಷ್ಟೊಂದು ಡೇಂಜರಸ್ ಅನ್ನೋದು ನನಗೆ ಗೊತ್ತಾಗಿತ್ತು. ಅವನ ಪೊಸೆಸಿವ್‌ನೆಸ್ ಅನ್ನು ಗುರುತಿಸುತ್ತಿದ್ದಂತೆ ಭಯವಾಗತೊಡಗಿತು. ಅವನ ಪ್ರೀತಿ ಭಾರ ಅನಿಸಲು ಶುರುವಾಯಿತು. ಆ ಭಾರ ಇಳಿಸಿಕೊಳ್ಳಲು ನಾನು ಆಯ್ದುಕೊಂಡಿದ್ದು ನೇರವಾದ ಹಾದಿ. ಅವನು ನಿರೀಕ್ಷೆಯಂತೆ ಮದುವೆಯ ಪ್ರಸ್ತಾಪ ಮಾಡಿದ. ಸಾಧ್ಯವಿಲ್ಲ, ಕಾರಣ ಕೇಳಬೇಡ ಎಂದು ಮುಖಕ್ಕೆ ಹೊಡೆದಂತೆ ಹೇಳಿದೆ. ಅವನು ವಿಲಿವಿಲಿ ಒದ್ದಾಡತೊಡಗಿದ. ಸುಮಾರು ಒಂದು ವರ್ಷ ನನ್ನ ಕಣ್ಣೆದುರಲ್ಲೇ ಅವನು ಕಣ್ಣೀರಾಗಿ ಕರಗಿಹೋಗುತ್ತಿದ್ದನ್ನು ನಾನೇ ನೋಡಿದೆ.ಅದಾದ ಮೇಲೆ ಅವನೂ ಊರು ಬಿಟ್ಟ, ನಾನೂ ಊರು ಬಿಟ್ಟೆ. ಇದೆಲ್ಲ ಮುಗಿದು ಏಳೆಂಟು ವರ್ಷಗಳೇ ಆಗಿ ಹೋದವು.ನಾನು ಮದುವೆಯಾದೆ, ಮಗಳೂ ಹುಟ್ಟಿದಳು.
ಹೆಚ್ಚುಕಡಿಮೆ ಅವನನ್ನು ಮರೆತೇ ಬಿಟ್ಟಿದ್ದೆ, ಮೊನ್ನೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಪಕ್ಕದಲ್ಲಿ ನಿಂತ ಕಾರಿನಲ್ಲಿ ಅವನ ಮುಖ ಕಾಣುವವರೆಗೆ. ಅವನನ್ನು ನೋಡಿದ ಕೂಡಲೇ ಎದೆ ಹೊಡೆದುಕೊಂಡಂತಾಯಿತು. ತಕ್ಷಣ ವ್ಯಾನಿಟಿ ಬ್ಯಾಗ್‌ನಿಂದ ವಿಜಿಟಿಂಗ್ ಕಾರ್ಡ್ ಒಂದನ್ನು ತೂರಿ ಫೋನ್ ಮಾಡೋ ಎಂದು ಕೂಗುವಷ್ಟರಲ್ಲಿ ಸಿಗ್ನಲ್ ಬಿಟ್ಟಿತ್ತು. ಬೆಂಗಳೂರಿನ ವಿಶಾಲ ವಾಹನ ವೃಂದದಲ್ಲಿ ಅವನು ಕಣ್ಮರೆಯಾಗುವುದನ್ನೇ ನನ್ನ ಸ್ಕೂಟಿಯಲ್ಲಿ ಕುಳಿತು ನೋಡಿ ಅಲ್ಲಿಂದ ಹೊರಬಂದಿದ್ದೆ.ಅವನು ಫೋನ್ ಮಾಡಲೇ ಇಲ್ಲ. ಎಸೆದದ್ದು ನನ್ನ ವಿಜಿಟಿಂಗ್ ಕಾರ್ಡೇನಾ ಅಂತ ಅನುಮಾನ ಶುರುವಾಯಿತು. ಅಥವಾ ಅವನೇ ಆ ಕಾರ್ಡು ಕಳೆದುಕೊಂಡನಾ ಅಂತನೂ ಸಂದೇಹ.
ತುಂಬಾ ಬದಲಾದಂತೆ ಕಂಡ. ಕಣ್ಣಿಗೆ ಕನ್ನಡಕ ಏರಿಕೊಂಡಿದೆ. ಫ್ರೆಂಚ್ ಗಡ್ಡ ಬಿಟ್ಟಿದ್ದಾನೆ. ಆಗಿನ ದಿನಗಳಲ್ಲಿ ಅವನು ಇನ್ನೂ ಪೀಚು. ತೆಳ್ಳಗೆ ಉರುವಿದರೆ ಬೀಳುವಂತಿದ್ದ. ಡ್ರೆಸ್ಸಿಂಗ್ ಸೆನ್ಸ್ ಇರಲಿಲ್ಲ. ಯಾವುದೋ ಪ್ಯಾಂಟು, ಯಾವುದೋ ಶರ್ಟು, ಎಳೆದುಕೊಂಡು ನಡೆಯಲೊಂದು ಚಪ್ಪಲಿ. ಈಗ ಸ್ಮಾರ್‍ಟ್ ಆಗಿದ್ದಾನೆ. ಕಣ್ಣುಗಳಲ್ಲಿ ಅದೇನೋ ಗಂಭೀರತೆ ಕಂಡಂತೆ ಆಯಿತು.
ಅದೆಲ್ಲ ಸರಿ, ಯಾಕೆ ಅವನು ಫೋನ್ ಮಾಡಲಿಲ್ಲ ಎಂಬ ಯೋಚನೆ ಕಾಡತೊಡಗಿತು. ಹೀಗೇ ಒಂದು ತಿಂಗಳಾದ ಮೇಲೆ ಅಚ್ಚರಿಯೆಂಬಂತೆ ಶಾಪಿಂಗ್ ಕಾಂಪ್ಲೆಕ್ಸ್ ಒಂದರಿಂದ ಅವನೇ ನಡೆದುಬರುತ್ತಿದ್ದುದನ್ನು ನೋಡಿದೆ. ಓಡಿ ಹೋಗಿ ಕೈಕುಲುಕಿದೆ. ಅವನೂ ನಕ್ಕ. ಹೇಗಿದ್ದೀಯಾ ಅಂದ. ಕಾಫಿ ಕುಡಿಯೋಣ ಎಂದೆ ನಾನೇ ಉತ್ಸಾಹದಲ್ಲಿ. ಪಕ್ಕದಲ್ಲೇ ಇದ್ದ ಕಾಫಿ ಡೇಗೆ ಹೋಗಿ ಕುಳಿತುಕೊಳ್ಳುತ್ತಿದ್ದಂತೆ ಎದೆಯಲ್ಲಿ ಮತ್ತೆ ನಡುಕ. ಸರಿಸುಮಾರು ನಾಲ್ಕು ವರ್ಷ ನನ್ನ ಮೇಲಿನ ಪ್ರೀತಿಯ ಹೊಳೆಯ ಸುಳಿಯಲ್ಲಿ ಸಿಕ್ಕಿ ಅವನು ಬರೆದಿದ್ದ ಪತ್ರಗಳೆಲ್ಲ ನೆನಪಾಯಿತು. ಅವನ ಪ್ರೇಮ ನಿವೇದನೆಯ ಒದ್ದಾಟಗಳು, ನನ್ನ ಸಿಟ್ಟುಸೆಡವಿಗೆ ಸಿಲುಕಿ ನಲುಗುತ್ತಲೇ ಬೆದರಿದ ಹರಿಣಿಯಂತೆ ನನ್ನ ಮುಂದೆ ಮಂಡಿಯೂರಿ ನಿಲ್ಲುತ್ತಿದ್ದ ಅವನ ಚಹರೆಗಳೆಲ್ಲ ನೆನಪಾದವು.
ಅಲ್ಲಪ್ಪಾ, ಅವತ್ತು ಕಾರ್ಡು ಎಸೆದಿದ್ದನಲ್ಲ? ಸಿಗಲಿಲ್ವಾ ಅಥವಾ ಮರೆತುಬಿಟ್ಟಾ? ಅಂತ ಕೇಳಿದೆ.
ಸಿಕ್ತು, ನನ್ನ ಹತ್ರಾನೇ ಇದೆ. ಮಾಡ್ಬೇಕು ಅಂದ್ಕೊಂಡೆ, ಸಮಯ ಸಿಗಲಿಲ್ಲ ಅಂದ.
ಅದು ನೇರವಾಗಿ ನನ್ನ ಅಹಂಕಾರಕ್ಕೆ ಬಿದ್ದ ಮೊದಲ ಪೆಟ್ಟು. ಸಾವರಿಸಿಕೊಂಡು ಅದೂ ಇದೂ ಮಾತನಾಡಿದೆ. ನನ್ನ ಮದುವೆ, ಗಂಡ, ಮಗಳ ಬಗ್ಗೆ ಉತ್ಸಾಹದಿಂದ ಒಂದಷ್ಟು ಹೇಳಿದೆ. ಎಲ್ಲವನ್ನೂ ಕೇಳಿದ.
ಆಮೇಲೆ ನಾನು ಕೇಳಿದಕ್ಕೆಲ್ಲ ಅವನು ಸರಸರ ಉತ್ತರಿಸುತ್ತ ಹೋದ, ನಾನು ಅಲುಗಾಡುತ್ತ ಹೋದೆ.
ಅದೆಲ್ಲ ಸರಿ, ಅಷ್ಟೊಂದು ಪ್ರೀತಿಸ್ತಾ ಇದ್ದೆಯಲ್ಲಾ? ಹೇಗೆ ಮರೆತೆ?
ಮರೆಯೋದು ಕಷ್ಟವಾಗಿತ್ತು, ಆದರೆ ಅಸಾಧ್ಯವೇನೂ ಆಗಿರಲಿಲ್ಲ. ಮರೆತೆ.
ಮದುವೆಯಾಗಿ ಖುಷಿಯಾಗಿದ್ದೀಯಾ? ಹೆಂಡತಿ ಹೇಗೆ?
ತುಂಬಾ ಖುಷಿಯಾಗಿದ್ದೇನೆ, ಅವಳು ಒಳ್ಳೆಯವಳು.
ಮದುವೆಯಾದ ಮೇಲೆ ನನ್ನ ನೆನಪು ಕಾಡಲಿಲ್ಲವೆ?
ಇಲ್ಲ.
ಅವಳ ಜಾಗದಲ್ಲಿ ನನ್ನನ್ನು ಯಾವತ್ತೂ ಕಲ್ಪಿಸಿಕೊಳ್ಳಲೇ ಇಲ್ಲವೆ?
ಖಂಡಿತ ಇಲ್ಲ.ಹಾಗಿದ್ರೆ ನೀನು ನನ್ನನ್ನು ಪ್ರೀತಿಸಿದ್ದೇ ಸುಳ್ಳಾ? (ನನ್ನ ಧ್ವನಿಯಲ್ಲಿ ವೈಬ್ರೇಷನ್ ಕಾಣಿಸಿಕೊಂಡಿತ್ತು)
ಹಾಗೇನು ಇಲ್ಲ. ಆದ್ರೆ ಅದು ಈಗ ಇಲ್ಲ.
ಒಂದು ವೇಳೆ ನಾನು ಈಗಲೂ ನಿನ್ನನ್ನು ಪ್ರೀತಿಸುತ್ತಿದ್ದರೆ?
ಅದು ನನ್ನಲ್ಲಿ ಯಾವ ಬದಲಾವಣೆಯನ್ನೂ ತರುವುದಿಲ್ಲ.ಯಾಕೆ?
ನಾನು ನನ್ನ ಹೆಂಡತಿಯನ್ನು ಪ್ರೀತಿಸುತ್ತೇನೆ, ಮತ್ತು ಅವಳನ್ನಷ್ಟೇ ಪ್ರೀತಿಸುತ್ತೇನೆ.
ಮಾತನಾಡಲು ಇನ್ನೇನೂ ಉಳಿದಿರಲಿಲ್ಲ. ಬಿಲ್ ಕೊಟ್ಟ, ಡ್ರಾಪ್ ಕೊಡಬೇಕಾ ಅಂದ. ಬೇಡ ನನ್ನ ಗಾಡಿಯಿದೆ ಎಂದೆ. ಹಾಗೆಯೇ ಕಣ್ಮರೆಯಾದ.
ಅವನ ಜತೆ ಭೇಟಿ ಮಾಡಿದ ನಂತರ ನಾನು ನಾನಾಗಿ ಉಳಿದಿಲ್ಲ. ಅಷ್ಟಕ್ಕೂ ಅವನು ಹಾಗೆ ಮಾತನಾಡಿದ್ದರಿಂದ ನನಗೇಕೆ ಸಂಕಟವಾಗಬೇಕು ಅನ್ನೋದೇ ನನಗರ್ಥವಾಗುತ್ತಿಲ್ಲ. ಅವನು ನನ್ನನ್ನು ಸಾರಾಸಗಟಾಗಿ ತಿರಸ್ಕರಿಸಿದನಲ್ಲ ಅಂತ ಯಾಕೆ ಯೋಚನೆ ಮಾಡುತ್ತಿದ್ದೇನೆ? ಅವನಿಗೂ ಹೆಂಡತಿಯಿದ್ದಾಳೆ, ನನಗೂ ಗಂಡನಿದ್ದಾನೆ, ಈ ಹೊತ್ತಿನಲ್ಲಿ ಅವನು ನನ್ನನ್ನು ಪುರಸ್ಕರಿಸಲು ಕಾರಣವಾದರೂ ಏನಿತ್ತು?ಅವನೇಕೆ ನನ್ನನ್ನು ಕಾಡಬೇಕು?
ಈಗಷ್ಟೆ ಗಂಡ ಬಂದ. ಏನೂ ಆಗಿಲ್ಲವೆಂಬಂತೆ ಅವನ ಜತೆ ನಾನು ನಾಟಕವಾಡುತ್ತೇನೆ. ಅದು ನನಗೆ ಅಭ್ಯಾಸ. ನಾನಂತೂ ಖುಷಿಯಾಗಿದ್ದೇನೆ ಎಂದು ತೋರಿಸಿಕೊಳ್ಳುವ ಹಮ್ಮು ನನ್ನದು.ಆದರೆ ಅವನು ಕೊಟ್ಟ ಹೊಡೆತಕ್ಕೆ ಬದುಕುವುದಾದರೂ ಹೇಗೆ? ಅವನಿಗೆ ನಾನು ಕೊಟ್ಟ ಒಂದು ವರ್ಷದ ಯಾತನೆಯನ್ನು ಅವನು ಒಂದೇ ದಿನ ಕೊಟ್ಟನಲ್ಲ?
ಇನ್ನು ನಾನು ನೆಮ್ಮದಿಯಾಗಿ ಇರುವುದು ಸಾಧ್ಯವೇ?ಇಲ್ಲ, ನಾನು ಅವನನ್ನು ಪ್ರೀತಿಸದೇ ಇರಲಾರೆ. ಅವನು ನನ್ನನ್ನು ತಿರಸ್ಕರಿಸಿದರೂ ನಾನು ಇನ್ನು ಅವನ ಅನ್ವೇಷಣೆಯಲ್ಲೇ ಬದುಕು ಸಾಗಿಸುತ್ತೇನೆ. ಅವನ ಒಂದು ಪ್ರೀತಿಯ ನೋಟಕ್ಕಾಗಿಯೇ ಬದುಕುತ್ತೇನೆ. ಅವನು ಮೊದಲಿನ ಅವನಾಗಿ ನನ್ನನ್ನು ನೋಡಲು ಸಾಧ್ಯವಿಲ್ಲ ಅಂತ ಗೊತ್ತಿದ್ದರೂ ನಾನು ಅದಕ್ಕಾಗಿಯೇ ಜೀವ ಸವೆಸುತ್ತೇನೆ.
ಏನಂದ್ರೀ ಹುಚ್ಚೀ... ಅಂತನಾ?
ಹೌದು ನಾನು ಹುಚ್ಚಿನೇ!

Wednesday, October 22, 2008

ಅವನು ಸತ್ತ ಮೇಲೆ ನಾನು ಸಿಂಧೂರ ಧರಿಸುತ್ತಿಲ್ಲ

ಮಾತಾಡ್ತಾನೇ ಇರ್‍ತೀನಿ. ಮಾತಾಡ್ತಾನೇ ಇರ್‍ತೀನಿ. ನಾನಿರೋದೇ ಹೀಗೆ. ಏನನ್ನು ಮಾತಾಡ್ತೀನಿ, ಹೇಗೆ ಮಾತಾಡ್ತೀನಿ ಅಂತ ನನಗೇ ಗೊತ್ತಾಗದಷ್ಟು ಮಾತಾಡ್ತೀನಿ. ಅಮ್ಮ ಆಗಾಗ ಹೇಳ್ತಾ ಇರ್‍ತಾಳೆ: ಕತ್ತೆ ಉಚ್ಚೆ ಹೊಯ್ದಂಗೆ ಮಾತಾಡ್ತೀಯಲ್ಲೇ ಅಂತ, ಹಂಗೆ ಮಾತಾಡ್ತಾ ಇರ್‍ತೀನಿ.

ಚಿಕ್ಕವಳಿದ್ದಾಗ ಅಪ್ಪ, ಅಮ್ಮ ಬಾಯಿ ಕಟ್ಟಿ ಹಾಕಿದ್ದರ ಪರಿಣಾಮವಿದು. ಅಪ್ಪ ಊರಿನ ಎಲ್ಲರ ಮನೆಯ ಮದುವೆ, ಶ್ರಾದ್ಧ, ಮುಂಜಿ, ಪುಣ್ಯ ಇತ್ಯಾದಿಗಳಿಗೆ ಜೋಳಿಗೆ ಕಟ್ಟಿಕೊಂಡು ಹೊರಟುಬಿಡುತ್ತಿದ್ದರು. ಪಾಪ, ಅವರಿಗೆ ದಕ್ಷಿಣೆ ಕಾಸಿನದೇ ಚಿಂತೆ. ಯಾರ ಮನೆಯಲ್ಲಾದರೂ ಕಾಸು ಸರಿಯಾಗಿ ಗಿಟ್ಟಲಿಲ್ಲವೆಂದರೆ ನನಗೂ, ಅಮ್ಮನಿಗೂ ರೇಗುತ್ತಿದ್ದರು. ಬಾಯಿ ಮುಚ್ಚಿಕೊಂಡು ಇರ್ರೇ.. ಪಾಪಿ ಮುಂಡೇವಾ... ಎಂದು ಗಂಟಲು ಹರಿಯುವಂತೆ ಕಿರುಚುತ್ತಿದ್ದರು. ನನಗಂತೂ ಯಾಕೆ ಹುಟ್ಟಿದ್ಯೇ ಪೀಡೆ ಅಂತನೇ ಜರಿಯುತ್ತಿದ್ದರು.

ದೊಡ್ಡವಳಾದ ಮೇಲಂತೂ ನನ್ನನ್ನು ಒಂದು ಹೇಸಿಗೆ ಅನ್ನೋ ಹಂಗೇ ನೋಡ್ತಿದ್ದರು ಅಪ್ಪ. ಅದರಲ್ಲೂ ತಿಂಗಳ ಮೂರು ದಿನ ಯಾವುದೋ ಪಿಶಾಚಿ ಮನೆಯಲ್ಲಿದೆಯೇನೋ ಅನ್ನುವಂತೆ ವರ್ತಿಸುತ್ತಿದ್ದರು. ಅದಾದ ಮೇಲೆ ಒಂದು ವಿನಾಕಾರಣದ ಪ್ರೀತಿ ಹುಟ್ಟಿಕೊಂಡ ಮೇಲೆ ನಾನು ಬದಲಾಗುತ್ತ ಹೋದೆ. ವಡ್ಡರ ಹುಡುಗ ರವಿರಾಜ ನನ್ನನ್ನು ಆಕರ್ಷಿಸಿದ್ದು ಹೇಗೆ ಎಂಬುದು ನನಗೆ ಇನ್ನೂ ದೊಡ್ಡ ವಿಸ್ಮಯ. ನಾನು ಅವನ ವಿಶಾಲವಾದ ತೋಳುಗಳಿಗೆ ಮರುಳಾದೆನೆ? ಅಪ್ಪ, ಚಿಕ್ಕಪ್ಪಗಳ ಪೀಚಲು ದೇಹಗಳನ್ನಷ್ಟೆ ನೋಡಿದ್ದ ನಾನು ರವಿರಾಜನ ಸದೃಢವಾದ ಮೈಕಟ್ಟನ್ನು ನೋಡಿ ಆಕರ್ಷಿತಳಾದೆನೆ? ಗೊತ್ತಿಲ್ಲ.

ಅಪ್ಪ ಮಾತೆತ್ತಿದರೆ ಧರ್ಮ, ಸಂಸ್ಕೃತಿ, ಮಡಿ, ಮೈಲಿಗೆ, ಸ್ವರ್ಗ, ನರಕ, ಸಂಸ್ಕಾರ ಎನ್ನುತ್ತಿದ್ದರು. ಅದು ಆಗ ನನಗೇನೂ ಅರ್ಥವಾಗುತ್ತಿರಲಿಲ್ಲ. ಅಪ್ಪ ನಮ್ಮೂರಿನ ಕೆಲ ಶೂದ್ರ ಹುಡುಗರನ್ನೂ ತಲೆಕೆಡಿಸುವ ಕೆಲಸ ಮಾಡುತ್ತಿದ್ದರು. ಈ ಹುಡುಗರ ಪೈಕಿ ನನ್ನ ರವಿರಾಜನೂ ಇದ್ದ. ಯಾವುದೋ ಪ್ರಾರ್ಥನಾ ಮಂದಿರದ ಗಲಾಟೆ ನಡೆಯುತ್ತಿದ್ದ ಕಾಲ. ನಮ್ಮ ಧರ್ಮಕ್ಕೆ ಧಕ್ಕೆ ಬಂದಿದೆ, ರಕ್ಷಿಸಿಕೊಳ್ಳಬೇಕು ಎಂದು ಅಪ್ಪ ನಮ್ಮೂರಿನ ಹುಡುಗರಿಗೆಲ್ಲ ತಲೆಕೆಡಿಸಿದ್ದ.

ನಾನು ರವಿರಾಜನಿಗೆ ಇದೆಲ್ಲ ಬಿಟ್ಟುಬಿಡು, ಹೇಗಿದ್ದರೂ ನಮ್ಮಪ್ಪ ನಮ್ಮಿಬ್ರಿಗೂ ಮದುವೆ ಮಾಡಲ್ಲ. ಎಲ್ಲಾದರೂ ದೂರ ಓಡಿಹೋಗೋಣ ಎನ್ನುತ್ತಿದ್ದೆ. ಆಯ್ತು ಮದುವೆಯಾಗೋಣ, ಅದಕ್ಕೂ ಮುನ್ನ ನಾನು ನನ್ನ ಧರ್ಮ ಉಳಿಸಿಕೊಳ್ಳಬೇಕಾಗಿದೆ ಎನ್ನುತ್ತಿದ್ದ ಅವನು. ಹಾಗೆ ಹೇಳಿದಾಗ ನನಗೆ ನಗು ಬರುತಿತ್ತು. ನಮ್ಮ ಜಾತಿಯವರಲ್ಲದೆ ಬೇರೆಯವರ ಮನೆಯಲ್ಲಿ ಕಾಲಿಡಬಾರದು ಎಂದು ಹೇಳಿ ನನ್ನನ್ನು ಬೆಳೆಸಿದವನು ನನ್ನಪ್ಪ. ನಾವು ಶ್ರೇಷ್ಠರು, ಉಳಿದವರೆಲ್ಲ ನಮ್ಮ ಸೇವೆ ಮಾಡಿಕೊಂಡಿರಬೇಕು ಎನ್ನುತ್ತಿದ್ದ. ಅದರಲ್ಲೂ ರವಿರಾಜನ ಜತೆ ನಾನು ಓಡಾಡಿದ್ದನ್ನು ಕೇಳಿದ ಮೇಲಂತೂ ಅಪ್ಪ ಬಾರುಕೋಲು ತೆಗೆದುಕೊಂಡು ಬಾಸುಂಡೆ ಬರುವಂತೆ ಹೊಡೆದಿದ್ದ. ರವಿರಾಜ ಯಾವ ಧರ್ಮದಲ್ಲಿ ಪ್ರಾಣಿಗಿಂತ ಕಡೆಯಾಗಿದ್ದನೋ ಆ ಧರ್ಮವನ್ನೇ ಉಳಿಸಲು ಹೊರಟಿದ್ದ.
ಇದಾದ ಕೆಲ ದಿನಗಳಲ್ಲೇ ರವಿರಾಜ ತನ್ನ ಧರ್ಮರಕ್ಷಣೆ ಕಾರ್ಯಕ್ಕೆ ದೂರದ ಊರಿಗೆ ಹೋದ. ಯಾವುದೋ ಒಂದು ಪ್ರಾರ್ಥನಾ ಮಂದಿರ ಒಡೆದು ಮತ್ತೊಂದನ್ನು ಕಟ್ಟುವ ಕಾರ್ಯವಂತೆ. ಇವನು ಪ್ರಾರ್ಥನಾ ಮಂದಿರದ ಕಟ್ಟಡ ಒಡೆಯುತ್ತಿದ್ದಾಗ ಪೊಲೀಸರ ಗುಂಡು ತಾಕಿ ಸತ್ತೇ ಹೋದನಂತೆ. ಅವನ ಹೆಣವನ್ನು ನೋಡುವ ಅವಕಾಶವೂ ನನಗೆ ಸಿಗಲಿಲ್ಲ. ಯಾವುದೋ ನದಿಯಲ್ಲಿ ಹೆಣ ತೇಲಿ ಹೋಯಿತಂತೆ.

ಒಂದು ವಾರ ನಾನು ಏನನ್ನೂ ತಿನ್ನಲಿಲ್ಲ. ಬರೀ ಅಳುತ್ತಲೇ ಕುಳಿತಿದ್ದೆ. ಒಂದು ದಿನ ಹೊರಗೆ ಹೋಗಿದ್ದವಳು ಮನೆಯೊಳಗೆ ಬಂದಾಗ ಅಪ್ಪ ಅಮ್ಮಳಿಗೆ ಹೇಳುತ್ತಿದ್ದುದನ್ನು ಕದ್ದು ಕೇಳಿಸಿಕೊಂಡೆ: ನೋಡ್ದೇನೇ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದೆ. ನಿನ್ನ ಮಗಳು ಬೋಳಿಮುಂಡೆ ನೀಚ ಜಾತಿಯವನ ಜತೆ ಸ್ನೇಹ ಮಾಡಿದ್ದಳು. ಓಡಿಹೋಗಿದ್ದರೆ ನಮ್ಮ ಮರ್ಯಾದೆ ಗತಿಯೇನು ಅಂತ ಯೋಚನೆಯಾಗಿತ್ತು. ಅದಕ್ಕೆ ಅವನನ್ನು ಮಂದಿರದ ಗಲಾಟೆಗೆ ಕಳಿಸಿದೆ. ಈಗ ಅವನು ಸತ್ತೇ ಹೋದ. ಅವನ ಹೆಣದ ಜತೆ ಮದುವೆಯಾಗ್ತಾಳಾ ಕಳ್ಳ ಲೌಡಿ? ಎನ್ನುತ್ತಿದ್ದ ಅವನು.

ಹೀಗೆ ನನ್ನಲ್ಲಿ ಹುಟ್ಟಿಕೊಂಡಿದ್ದ ಪ್ರೀತಿಯನ್ನು ನಿರ್ದಯವಾಗಿ ನಮ್ಮಪ್ಪನೇ ಕೊಂದ ಮೇಲೆ ನನಗೆ ಉಳಿದಿದ್ದ ದಾರಿಯಾದರೂ ಏನು? ಅಪ್ಪ ನೋಡಿದ ಹುಡುಗನನ್ನೇ ಮದುವೆಯಾದೆ. ಮದುವೆಯಾದವನೊಂದಿಗೆ ಬಾಳಲು ಸಾದ್ಯವಾಗದೆ ಅವನನ್ನು ಬಿಟ್ಟೆ.
ಈಗ ಬದುಕಬೇಕು, ಅದಕ್ಕಾಗಿ ಯಾವುದೋ ಮಠ ಸೇರಿಕೊಂಡಿದ್ದೇನೆ. ಮಠ ಸೇರಿಕೊಂಡ ಒಂದು ವಾರಕ್ಕೆ ಮಠದ ಸ್ವಾಮಿ ನನ್ನು ಹುರಿದು ತಿಂದ. ವಾರಕ್ಕೊಮ್ಮೆ ನನ್ನ ಸೇವೆ ಬೇಕೇ ಬೇಕಂತೆ ಅವನಿಗೆ. ಈ ಸ್ವಾಮೀಜಿಗೂ ನನ್ನಪ್ಪನಿಗೂ ಅಷ್ಟೊಂದು ವ್ಯತ್ಯಾಸವಿಲ್ಲ. ಇವನೂ ಧರ್ಮರಕ್ಷಣೆ ಅದೂ ಇದೂ ಎನ್ನುತ್ತಿರುತ್ತಾನೆ. ಮಠದ ತುಂಬ ಕೆಲವು ಹೆಣ್ಣುಗಳಿದ್ದಾವೆ. ಅವುಗಳಿಗೆ ಈ ಸ್ವಾಮಿಯ ಜತೆಗಿನ ಸಂಬಂಧ ದೇಹಬಾಧೆ ತೀರಿಸುವುದಿಲ್ಲ. ಬೇರೆ ಗಂಡಸರೊಂದಿಗೆ ಸೇರುವುದನ್ನು ಸ್ವಾಮಿ ಸಹಿಸುವುದಿಲ್ಲ. ಅದಕ್ಕಾಗಿ ಈ ಹೆಂಗಸರು ಅವರವರೇ ತಬ್ಬಿಕೊಂಡು ಮಲಗಿಕೊಳ್ಳುತ್ತಾರೆ. ನನ್ನ ಜತೆಯೂ ಇದೆಲ್ಲ ನಡೆಯಿತು. ಮೊದಮೊದಲು ಅಸಹ್ಯ ಎನಿಸಿದರೂ ಈಗ ಅದೂ ನನಗೆ ಅಭ್ಯಾಸವಾಗಿದೆ.

ಮಠದ ಸ್ವಾಮಿ ಒಂದು ಪತ್ರಿಕೆ ಹೊರತರುತ್ತಾನೆ. ಅದರಲ್ಲಿ ನಾನು ಏನಾದರೂ ಬರೆಯಲೇಬೇಕು. ಮನಸ್ಸಿಗೆ ಅನಿಸಿದ್ದನ್ನೇ ಬರೆಯಲು ಸಾಧ್ಯವೆ? ಹಾಗೇನಾದರೂ ಬರೆದರೆ ಸ್ವಾಮಿ ನನ್ನನ್ನು ಹೊರಗೆ ಕಳಿಸುತ್ತಾನೆ. ಅದಕ್ಕಾಗಿ ನಾನೂ ಸಹ ಧರ್ಮರಕ್ಷಣೆಯ ಬಗೆ ಬರೆಯಲು ಆರಂಭಿಸಿದೆ. ನನಗೆ ಗೊತ್ತು, ನಾನು ಮಾಡುತ್ತಿರುವುದು ಅಕ್ಷರ ಹಾದರ ಅಂತ. ಆದರೇನು ಮಾಡುವುದು? ಹಾದರವನ್ನೇ ಮಾಡಿದವಳಿಗೆ ಅಕ್ಷರ ಹಾದರ ಮಾಡುವುದು ಕಷ್ಟದ ಕೆಲಸವೇ?

ಒಂದು ವಿಷಯ ಮರೆತೆ. ನನ್ನನ್ನು ಮಠಕ್ಕೆ ಸೇರಿಸಿದವರು ಇಬ್ಬರು ಗೆಳೆಯರು. ಅವರೂ ಸಹ ಈ ಸ್ವಾಮಿಯ ಜತೆಗಾರರೇ. ಸ್ವಾಮಿಯ ಜತೆ ಸೇರಿಸಿದ ಕೃತಜ್ಞತೆಗಾಗಿ ನಾನು ಅವರಿಗೆ ಆಗಾಗ ಆಹಾರವಾಗುತ್ತಿರುತ್ತೇನೆ.
ಇದೆಲ್ಲ ಹಿಂಸೆಯ ನಡುವೆ ನನಗೆ ನನ್ನ ಹುಡುಗ ರವಿರಾಜ ನೆನಪಾಗುತ್ತದೆ. ಅವನ ದಷ್ಟಪುಷ್ಟ ತೋಳುಗಳು ನೆನಪಾಗುತ್ತವೆ. ಸ್ವಾಮಿ ಮತ್ತವನ ಗೆಳೆಯರು ನನ್ನನ್ನು ಆಕ್ರಮಿಸಿಕೊಳ್ಳುವಾಗ ರವಿರಾಜನನ್ನೇ ನೆನಪಿಸಿಕೊಳ್ಳುತ್ತೇನೆ. ಹಾಗಾಗಿ ಈ ಮಿಲನದ ಕ್ರಿಯೆಯೂ ನನಗೆ ಒಂದು ಬಗೆಯ ತೃಪ್ತಿ ತರುತ್ತದೆ.

ರವಿರಾಜ ಅಪ್ಪನ ಚಿತಾವಣೆಯಿಂದ ಕಡೆ ಕಡೆಗೆ ಹಣೆಯ ತುಂಬ ಉದ್ದ ಸಿಂಧೂರ ಧರಿಸುತ್ತಿದ್ದ. ಅದನ್ನು ನೋಡಿದರೆ ತುಂಬ ಭಯವಾಗುತ್ತಿತ್ತು. ಆ ಸಿಂಧೂರವೇ ಅವನನ್ನು ಸಾವಾಗಿ ಕಾಡಲಿದೆ ಎಂದು ಅವನು ಎಣಿಸಿರಲಿಲ್ಲ ಅನಿಸುತ್ತದೆ. ಅವನು ಸತ್ತ ಮೇಲೆ ನಾನು ಸಿಂಧೂರ ಧರಿಸುತ್ತಿಲ್ಲ.