ಕುದೀತಾನೇ ಇದೀನಿ. ನೆತ್ತಿಯಿಂದ ಹಿಡಿದು ಅಂಗಾಲಿನವರೆಗೆ ಇದೆಂಥದೋ ನಡುಕ. ಕಣ್ಣ ರೆಪ್ಪೆ, ತುಟಿಗಳೆಲ್ಲ ಅದುರುತ್ತಲೇ ಇವೆ. ಕಿಬ್ಬೊಟ್ಟೆಯಾಳದಿಂದ ಎದ್ದು ನಿಲ್ಲುವ ಸಂಕಟ. ಪದೇಪದೇ ದಾಹ. ಎಷ್ಟು ನೀರು ಕುಡಿದರೂ ಇಂಗದ ದಾಹ.ಇದೆಂಥ ಬೇಗೆ ಅರ್ಥವಾಗ್ತಾ ಇಲ್ಲ. ಅವನು ನನ್ನ ಅಹಂಕಾರಕ್ಕೇ ದೊಡ್ಡ ಪೆಟ್ಟು ಕೊಟ್ಟ ಅನಿಸುತ್ತದೆ. ಅಷ್ಟಕ್ಕೂ ಅವನು ಆಡಿದ ಮಾತಾದರೂ ಏನು? ಅವನೇನು ನನ್ನನ್ನು ನಿಂದಿಸಲಿಲ್ಲ, ಕೆಡುಕು ಮಾತನ್ನೇನೂ ಆಡಲಿಲ್ಲ. ಆತ್ಮೀಯತೆಯಿಂದಲೇ ಮಾತನಾಡಿಸಿದ. ಕಾಫಿ ಕುಡಿಸಿದ. ನನ್ನ ಪ್ರಶ್ನೆಗೆ ನಿಖರವಾಗಿ ಉತ್ತರಿಸಿದ. ಅವನ ಉತ್ತರವೇ ನನ್ನನ್ನು ಇಷ್ಟು ಯಾತನೆಗೆ ತಳ್ಳಬೇಕೇ? ಒಂದೂ ಅರ್ಥವಾಗುತ್ತಿಲ್ಲ.
ಈಗಷ್ಟೆ ಪಕ್ಕದ ಅಪಾರ್ಟ್‌ಮೆಂಟ್‌ನ ಸಬೀನಾ ಬಂದುಹೋದಳು. ರಾಜಸ್ತಾನಿ ಹೆಣ್ಣುಮಗಳು. ಊರಿಗೆ ಹೋಗಿದ್ದವಳು ನಿನ್ನೆಯಷ್ಟೆ ವಾಪಾಸು ಬಂದಿದ್ದಾಳೆ. ಅವಳಿಗೆ ಅಲ್ಲಿನ ವಿಷಯವನ್ನೆಲ್ಲ ಹೇಳುವ ಧಾವಂತ. ಆಮೇಲೆ ಮಾತಾಡೋಣ ಅಂತ ಹೊರಗಟ್ಟಿದೆ. ಅವಳ ಬಳಿ ನನ್ನ ಸಂಕಟ ತೋರಿಸಿಕೊಳ್ಳಲಿಲ್ಲ. ತುಂಬ ಖುಷಿಯಾಗಿದ್ದೇನೆ, ಸ್ವಲ್ಪ ಕಾಲ ನನ್ನನ್ನು ನನ್ನ ಪಾಡಿಗೆ ಒಬ್ಬಳೇ ಇರಲು ಬಿಡು ಎಂದೆ. ಅದೂ ಸಹ ನನ್ನ ಅಹಂಕಾರದ ಕ್ರಿಯೆಯೇ ಆಗಿತ್ತಲ್ವಾ? ತುಂಬಾ ನೋವಾದಾಗಲೂ ನಾನೇಕೆ ಖುಷಿಯಾಗಿರುವಂತೆ ನಟಿಸಬೇಕು? ಯಾಕೆ ಈ ಮುಖವಾಡದ ಬದುಕು?
ಅವನು ಮಾತ್ರ ಯಾವತ್ತೂ ಮುಖವಾಡಗಳನ್ನಿಟ್ಟುಕೊಂಡು ನನ್ನ ಬಳಿಗೆ ಬಂದವನಲ್ಲ. ಸುಖಾಸುಮ್ಮನೆ ನನ್ನನ್ನು ಪ್ರೀತಿಸಿದವನೂ ಅಲ್ಲ. ಅವನು ನನ್ನನ್ನು ಪ್ರೀತಿಸುವಂತೆ ಸೆಳೆದವಳು ನಾನೇ ಎಂಬುದು ನನಗೂ ಗೊತ್ತು, ಅವನಿಗೂ ಗೊತ್ತು.ನಾನು ಕಾಲೇಜು ಓದುವಾಗ ಪರಿಚಯವಾದವನು ಅವನು. ಬುದ್ಧಿವಂತ ಹುಡುಗ. ಬಹುಶಃ ನನಗಿಂತ ಬುದ್ಧಿವಂತ. ಬೇರೆ ಹುಡುಗರೆಲ್ಲ ನನ್ನ ಕಡೆ ವಿಶೇಷ ಸೆಳೆತ ಇಟ್ಟುಕೊಂಡಿದ್ದರೂ ಇವನು ಮಾತ್ರ ತನ್ನ ಪಾಡಿಗೆ ತಾನಿದ್ದ. ಅವನನ್ನು ಸೆಳೆಯದೇ ಹೋದನಲ್ಲ ಎಂಬ ಕೊರಗು ಒಳಗೊಳಗೆ ಕಾಡತೊಡಗಿತ್ತು. ಅದನ್ನು ಕೊರಗು ಎನ್ನುವುದೋ ಸ್ವಾರ್ಥ ಎನ್ನುವುದೋ? ನಿಧಾನವಾಗಿ ಅವನನ್ನು ಸಮೀಪಿಸಿದೆ. ಹುಡುಗಿಯರ ಜಗತ್ತಿನ ಕುರಿತು ಏನೇನೂ ಗೊತ್ತಿಲ್ಲದ ಅಮಾಯಕ ಅವನು. ನಾನು ಹತ್ತಿರವಾದಂತೆ ಗರಿಗೆದರತೊಡಗಿದ. ದಿನದಿಂದ ದಿನಕ್ಕೆ ತೆರೆದುಕೊಳ್ಳುತ್ತ ಹೋದ. ನನ್ನ ಹೊರತಾಗಿ ಇನ್ನೊಂದು ಜಗತ್ತೇ ಇಲ್ಲವೇನೋ ಅನ್ನುವಷ್ಟು ಆವರಿಸಿಕೊಳ್ಳತೊಡಗಿದೆ.
ಅಷ್ಟು ಸಾಕಾಗಿತ್ತು ನನಗೆ. ಇಷ್ಟೊಂದು ಪ್ರೀತಿಸುವವರು ಎಷ್ಟೊಂದು ಡೇಂಜರಸ್ ಅನ್ನೋದು ನನಗೆ ಗೊತ್ತಾಗಿತ್ತು. ಅವನ ಪೊಸೆಸಿವ್‌ನೆಸ್ ಅನ್ನು ಗುರುತಿಸುತ್ತಿದ್ದಂತೆ ಭಯವಾಗತೊಡಗಿತು. ಅವನ ಪ್ರೀತಿ ಭಾರ ಅನಿಸಲು ಶುರುವಾಯಿತು. ಆ ಭಾರ ಇಳಿಸಿಕೊಳ್ಳಲು ನಾನು ಆಯ್ದುಕೊಂಡಿದ್ದು ನೇರವಾದ ಹಾದಿ. ಅವನು ನಿರೀಕ್ಷೆಯಂತೆ ಮದುವೆಯ ಪ್ರಸ್ತಾಪ ಮಾಡಿದ. ಸಾಧ್ಯವಿಲ್ಲ, ಕಾರಣ ಕೇಳಬೇಡ ಎಂದು ಮುಖಕ್ಕೆ ಹೊಡೆದಂತೆ ಹೇಳಿದೆ. ಅವನು ವಿಲಿವಿಲಿ ಒದ್ದಾಡತೊಡಗಿದ. ಸುಮಾರು ಒಂದು ವರ್ಷ ನನ್ನ ಕಣ್ಣೆದುರಲ್ಲೇ ಅವನು ಕಣ್ಣೀರಾಗಿ ಕರಗಿಹೋಗುತ್ತಿದ್ದನ್ನು ನಾನೇ ನೋಡಿದೆ.ಅದಾದ ಮೇಲೆ ಅವನೂ ಊರು ಬಿಟ್ಟ, ನಾನೂ ಊರು ಬಿಟ್ಟೆ. ಇದೆಲ್ಲ ಮುಗಿದು ಏಳೆಂಟು ವರ್ಷಗಳೇ ಆಗಿ ಹೋದವು.ನಾನು ಮದುವೆಯಾದೆ, ಮಗಳೂ ಹುಟ್ಟಿದಳು.
ಹೆಚ್ಚುಕಡಿಮೆ ಅವನನ್ನು ಮರೆತೇ ಬಿಟ್ಟಿದ್ದೆ, ಮೊನ್ನೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಪಕ್ಕದಲ್ಲಿ ನಿಂತ ಕಾರಿನಲ್ಲಿ ಅವನ ಮುಖ ಕಾಣುವವರೆಗೆ. ಅವನನ್ನು ನೋಡಿದ ಕೂಡಲೇ ಎದೆ ಹೊಡೆದುಕೊಂಡಂತಾಯಿತು. ತಕ್ಷಣ ವ್ಯಾನಿಟಿ ಬ್ಯಾಗ್‌ನಿಂದ ವಿಜಿಟಿಂಗ್ ಕಾರ್ಡ್ ಒಂದನ್ನು ತೂರಿ ಫೋನ್ ಮಾಡೋ ಎಂದು ಕೂಗುವಷ್ಟರಲ್ಲಿ ಸಿಗ್ನಲ್ ಬಿಟ್ಟಿತ್ತು. ಬೆಂಗಳೂರಿನ ವಿಶಾಲ ವಾಹನ ವೃಂದದಲ್ಲಿ ಅವನು ಕಣ್ಮರೆಯಾಗುವುದನ್ನೇ ನನ್ನ ಸ್ಕೂಟಿಯಲ್ಲಿ ಕುಳಿತು ನೋಡಿ ಅಲ್ಲಿಂದ ಹೊರಬಂದಿದ್ದೆ.ಅವನು ಫೋನ್ ಮಾಡಲೇ ಇಲ್ಲ. ಎಸೆದದ್ದು ನನ್ನ ವಿಜಿಟಿಂಗ್ ಕಾರ್ಡೇನಾ ಅಂತ ಅನುಮಾನ ಶುರುವಾಯಿತು. ಅಥವಾ ಅವನೇ ಆ ಕಾರ್ಡು ಕಳೆದುಕೊಂಡನಾ ಅಂತನೂ ಸಂದೇಹ.
ತುಂಬಾ ಬದಲಾದಂತೆ ಕಂಡ. ಕಣ್ಣಿಗೆ ಕನ್ನಡಕ ಏರಿಕೊಂಡಿದೆ. ಫ್ರೆಂಚ್ ಗಡ್ಡ ಬಿಟ್ಟಿದ್ದಾನೆ. ಆಗಿನ ದಿನಗಳಲ್ಲಿ ಅವನು ಇನ್ನೂ ಪೀಚು. ತೆಳ್ಳಗೆ ಉರುವಿದರೆ ಬೀಳುವಂತಿದ್ದ. ಡ್ರೆಸ್ಸಿಂಗ್ ಸೆನ್ಸ್ ಇರಲಿಲ್ಲ. ಯಾವುದೋ ಪ್ಯಾಂಟು, ಯಾವುದೋ ಶರ್ಟು, ಎಳೆದುಕೊಂಡು ನಡೆಯಲೊಂದು ಚಪ್ಪಲಿ. ಈಗ ಸ್ಮಾರ್‍ಟ್ ಆಗಿದ್ದಾನೆ. ಕಣ್ಣುಗಳಲ್ಲಿ ಅದೇನೋ ಗಂಭೀರತೆ ಕಂಡಂತೆ ಆಯಿತು.
ಅದೆಲ್ಲ ಸರಿ, ಯಾಕೆ ಅವನು ಫೋನ್ ಮಾಡಲಿಲ್ಲ ಎಂಬ ಯೋಚನೆ ಕಾಡತೊಡಗಿತು. ಹೀಗೇ ಒಂದು ತಿಂಗಳಾದ ಮೇಲೆ ಅಚ್ಚರಿಯೆಂಬಂತೆ ಶಾಪಿಂಗ್ ಕಾಂಪ್ಲೆಕ್ಸ್ ಒಂದರಿಂದ ಅವನೇ ನಡೆದುಬರುತ್ತಿದ್ದುದನ್ನು ನೋಡಿದೆ. ಓಡಿ ಹೋಗಿ ಕೈಕುಲುಕಿದೆ. ಅವನೂ ನಕ್ಕ. ಹೇಗಿದ್ದೀಯಾ ಅಂದ. ಕಾಫಿ ಕುಡಿಯೋಣ ಎಂದೆ ನಾನೇ ಉತ್ಸಾಹದಲ್ಲಿ. ಪಕ್ಕದಲ್ಲೇ ಇದ್ದ ಕಾಫಿ ಡೇಗೆ ಹೋಗಿ ಕುಳಿತುಕೊಳ್ಳುತ್ತಿದ್ದಂತೆ ಎದೆಯಲ್ಲಿ ಮತ್ತೆ ನಡುಕ. ಸರಿಸುಮಾರು ನಾಲ್ಕು ವರ್ಷ ನನ್ನ ಮೇಲಿನ ಪ್ರೀತಿಯ ಹೊಳೆಯ ಸುಳಿಯಲ್ಲಿ ಸಿಕ್ಕಿ ಅವನು ಬರೆದಿದ್ದ ಪತ್ರಗಳೆಲ್ಲ ನೆನಪಾಯಿತು. ಅವನ ಪ್ರೇಮ ನಿವೇದನೆಯ ಒದ್ದಾಟಗಳು, ನನ್ನ ಸಿಟ್ಟುಸೆಡವಿಗೆ ಸಿಲುಕಿ ನಲುಗುತ್ತಲೇ ಬೆದರಿದ ಹರಿಣಿಯಂತೆ ನನ್ನ ಮುಂದೆ ಮಂಡಿಯೂರಿ ನಿಲ್ಲುತ್ತಿದ್ದ ಅವನ ಚಹರೆಗಳೆಲ್ಲ ನೆನಪಾದವು.
ಅಲ್ಲಪ್ಪಾ, ಅವತ್ತು ಕಾರ್ಡು ಎಸೆದಿದ್ದನಲ್ಲ? ಸಿಗಲಿಲ್ವಾ ಅಥವಾ ಮರೆತುಬಿಟ್ಟಾ? ಅಂತ ಕೇಳಿದೆ.
ಸಿಕ್ತು, ನನ್ನ ಹತ್ರಾನೇ ಇದೆ. ಮಾಡ್ಬೇಕು ಅಂದ್ಕೊಂಡೆ, ಸಮಯ ಸಿಗಲಿಲ್ಲ ಅಂದ.
ಅದು ನೇರವಾಗಿ ನನ್ನ ಅಹಂಕಾರಕ್ಕೆ ಬಿದ್ದ ಮೊದಲ ಪೆಟ್ಟು. ಸಾವರಿಸಿಕೊಂಡು ಅದೂ ಇದೂ ಮಾತನಾಡಿದೆ. ನನ್ನ ಮದುವೆ, ಗಂಡ, ಮಗಳ ಬಗ್ಗೆ ಉತ್ಸಾಹದಿಂದ ಒಂದಷ್ಟು ಹೇಳಿದೆ. ಎಲ್ಲವನ್ನೂ ಕೇಳಿದ.
ಆಮೇಲೆ ನಾನು ಕೇಳಿದಕ್ಕೆಲ್ಲ ಅವನು ಸರಸರ ಉತ್ತರಿಸುತ್ತ ಹೋದ, ನಾನು ಅಲುಗಾಡುತ್ತ ಹೋದೆ.
ಅದೆಲ್ಲ ಸರಿ, ಅಷ್ಟೊಂದು ಪ್ರೀತಿಸ್ತಾ ಇದ್ದೆಯಲ್ಲಾ? ಹೇಗೆ ಮರೆತೆ?
ಮರೆಯೋದು ಕಷ್ಟವಾಗಿತ್ತು, ಆದರೆ ಅಸಾಧ್ಯವೇನೂ ಆಗಿರಲಿಲ್ಲ. ಮರೆತೆ.
ಮದುವೆಯಾಗಿ ಖುಷಿಯಾಗಿದ್ದೀಯಾ? ಹೆಂಡತಿ ಹೇಗೆ?
ತುಂಬಾ ಖುಷಿಯಾಗಿದ್ದೇನೆ, ಅವಳು ಒಳ್ಳೆಯವಳು.
ಮದುವೆಯಾದ ಮೇಲೆ ನನ್ನ ನೆನಪು ಕಾಡಲಿಲ್ಲವೆ?
ಇಲ್ಲ.
ಅವಳ ಜಾಗದಲ್ಲಿ ನನ್ನನ್ನು ಯಾವತ್ತೂ ಕಲ್ಪಿಸಿಕೊಳ್ಳಲೇ ಇಲ್ಲವೆ?
ಖಂಡಿತ ಇಲ್ಲ.ಹಾಗಿದ್ರೆ ನೀನು ನನ್ನನ್ನು ಪ್ರೀತಿಸಿದ್ದೇ ಸುಳ್ಳಾ? (ನನ್ನ ಧ್ವನಿಯಲ್ಲಿ ವೈಬ್ರೇಷನ್ ಕಾಣಿಸಿಕೊಂಡಿತ್ತು)
ಹಾಗೇನು ಇಲ್ಲ. ಆದ್ರೆ ಅದು ಈಗ ಇಲ್ಲ.
ಒಂದು ವೇಳೆ ನಾನು ಈಗಲೂ ನಿನ್ನನ್ನು ಪ್ರೀತಿಸುತ್ತಿದ್ದರೆ?
ಅದು ನನ್ನಲ್ಲಿ ಯಾವ ಬದಲಾವಣೆಯನ್ನೂ ತರುವುದಿಲ್ಲ.ಯಾಕೆ?
ನಾನು ನನ್ನ ಹೆಂಡತಿಯನ್ನು ಪ್ರೀತಿಸುತ್ತೇನೆ, ಮತ್ತು ಅವಳನ್ನಷ್ಟೇ ಪ್ರೀತಿಸುತ್ತೇನೆ.
ಮಾತನಾಡಲು ಇನ್ನೇನೂ ಉಳಿದಿರಲಿಲ್ಲ. ಬಿಲ್ ಕೊಟ್ಟ, ಡ್ರಾಪ್ ಕೊಡಬೇಕಾ ಅಂದ. ಬೇಡ ನನ್ನ ಗಾಡಿಯಿದೆ ಎಂದೆ. ಹಾಗೆಯೇ ಕಣ್ಮರೆಯಾದ.
ಅವನ ಜತೆ ಭೇಟಿ ಮಾಡಿದ ನಂತರ ನಾನು ನಾನಾಗಿ ಉಳಿದಿಲ್ಲ. ಅಷ್ಟಕ್ಕೂ ಅವನು ಹಾಗೆ ಮಾತನಾಡಿದ್ದರಿಂದ ನನಗೇಕೆ ಸಂಕಟವಾಗಬೇಕು ಅನ್ನೋದೇ ನನಗರ್ಥವಾಗುತ್ತಿಲ್ಲ. ಅವನು ನನ್ನನ್ನು ಸಾರಾಸಗಟಾಗಿ ತಿರಸ್ಕರಿಸಿದನಲ್ಲ ಅಂತ ಯಾಕೆ ಯೋಚನೆ ಮಾಡುತ್ತಿದ್ದೇನೆ? ಅವನಿಗೂ ಹೆಂಡತಿಯಿದ್ದಾಳೆ, ನನಗೂ ಗಂಡನಿದ್ದಾನೆ, ಈ ಹೊತ್ತಿನಲ್ಲಿ ಅವನು ನನ್ನನ್ನು ಪುರಸ್ಕರಿಸಲು ಕಾರಣವಾದರೂ ಏನಿತ್ತು?ಅವನೇಕೆ ನನ್ನನ್ನು ಕಾಡಬೇಕು?
ಈಗಷ್ಟೆ ಗಂಡ ಬಂದ. ಏನೂ ಆಗಿಲ್ಲವೆಂಬಂತೆ ಅವನ ಜತೆ ನಾನು ನಾಟಕವಾಡುತ್ತೇನೆ. ಅದು ನನಗೆ ಅಭ್ಯಾಸ. ನಾನಂತೂ ಖುಷಿಯಾಗಿದ್ದೇನೆ ಎಂದು ತೋರಿಸಿಕೊಳ್ಳುವ ಹಮ್ಮು ನನ್ನದು.ಆದರೆ ಅವನು ಕೊಟ್ಟ ಹೊಡೆತಕ್ಕೆ ಬದುಕುವುದಾದರೂ ಹೇಗೆ? ಅವನಿಗೆ ನಾನು ಕೊಟ್ಟ ಒಂದು ವರ್ಷದ ಯಾತನೆಯನ್ನು ಅವನು ಒಂದೇ ದಿನ ಕೊಟ್ಟನಲ್ಲ?
ಇನ್ನು ನಾನು ನೆಮ್ಮದಿಯಾಗಿ ಇರುವುದು ಸಾಧ್ಯವೇ?ಇಲ್ಲ, ನಾನು ಅವನನ್ನು ಪ್ರೀತಿಸದೇ ಇರಲಾರೆ. ಅವನು ನನ್ನನ್ನು ತಿರಸ್ಕರಿಸಿದರೂ ನಾನು ಇನ್ನು ಅವನ ಅನ್ವೇಷಣೆಯಲ್ಲೇ ಬದುಕು ಸಾಗಿಸುತ್ತೇನೆ. ಅವನ ಒಂದು ಪ್ರೀತಿಯ ನೋಟಕ್ಕಾಗಿಯೇ ಬದುಕುತ್ತೇನೆ. ಅವನು ಮೊದಲಿನ ಅವನಾಗಿ ನನ್ನನ್ನು ನೋಡಲು ಸಾಧ್ಯವಿಲ್ಲ ಅಂತ ಗೊತ್ತಿದ್ದರೂ ನಾನು ಅದಕ್ಕಾಗಿಯೇ ಜೀವ ಸವೆಸುತ್ತೇನೆ.
ಏನಂದ್ರೀ ಹುಚ್ಚೀ... ಅಂತನಾ?
ಹೌದು ನಾನು ಹುಚ್ಚಿನೇ!
Friday, October 24, 2008
Subscribe to:
Post Comments (Atom)
20 comments:
ಕತೆ ಹೇಳುವ ಕಲೆ ನಿಮಗೆ ಚೆನ್ನಾಗಿ ಸಿದ್ಧಿಸಿದೆ. ನಿಮ್ಮ ಮೊದಲನೆಯ ಕತೆಯನ್ನು ಓದಿದ ನಂತರ ಎರಡನೆಯ ಕತೆ ಓದಿದರೆ ಒಂದು ಎಳೆಯಲ್ಲಿ ಪೋಣಿಸಿದಂತಿದೆ. ಗಹನವಾದ ವಿಷಯವನ್ನು ಕತೆಯ ಮೂಲಕ ಹೇಳುತ್ತಿದ್ದೀರಿ ಅನ್ನಿಸುತ್ತಿದೆ. ನಿರೂಪಣಾ ತಂತ್ರ, ವಸ್ತು ಸೂಪರ್
- ಮಂಜುನಾಥ ಸ್ವಾಮಿ
ಸೂಪರ್ರಾಗಿದೆ!!!
~ ಹರ್ಷ
ಆವತ್ತು ಅಹಂ ಪುಷ್ಟಿಗಾಗಿ ಆಟವಾಡಿತ್ತಲ್ಲ ಅದೇ ಮನಸ್ಸು.. ಮತ್ತೆ ಆಟವಾಡಲು ಹೊರಟೀತೂ, ಎಚ್ಚರವಹಿಸಿ.. ಕಥಾನಾಯಕಿ..
ಮಂದಾರ ಅವರೇ,
ವಸ್ತು ಮತ್ತು ನಿರೂಪಣೆ ಎರಡೂ ಚೆನ್ನಾಗಿವೆ :)
Good writing style.. but that heroine of the story is a horrible female! :-) hammu bimmu ella iruvavaLu...!
ನಿಜ ಹೇಳಿ ಮಂದಾರ,
ನೀವು ‘ನಮ್ಮೂರ ಮಂದಾರ’ ಅಲ್ಲ.
ನೀವು ಯಾರು? ಇಲ್ಲಿನ ಬರಹದಲ್ಲಿ ಜೋಗಿ, ಬೆಳಗೆರೆ ಎಲ್ಲ ಇದ್ದಾರೆ.
ಕಥೆಯ ಬಿಗು ನಿರೂಪಣೆಯ ಹಿಂದೆ ಸಾಮಾನ್ಯ ಬ್ಲಾಗಿಗರಿಗಿಲ್ಲದ ಪ್ರಬುದ್ಧತೆ ಇದೆ.
ಅದೇನೆ ಇರಲಿ, ಹೀಗೆ ಒಳ್ಳೆಯ ಬರಹಗಳು ಬರುತ್ತಿರಲಿ ನಿಮ್ಮಿಂದ.
-ಚಿನ್ಮಯ.
ನಿಜಕ್ಕೂ ಮೊದಲಿನ ಕತೆ ಓದಿದ ಮೇಲೆ ಇದು ಯಾಕೋ ಸಪ್ಪೆ ಅನ್ನಿಸ್ತು.ಕಥಾನಾಯಕಿಯದು ತೀರಾ ಬಾಲಿಶವಾದ ಯೋಚನಾಲಹರಿ ಅನ್ನಿಸ್ತು.(ವಸ್ತುಸ್ಥಿತಿ ಅದೇ ಆಗಿರಲೂಬಹುದು, ಆದ್ರೆ ನಿಮ್ಮ ಕತೆಕಟ್ಟುವ ಕಲೆ ಬೇರೇನೋ expectation ಸೆಟ್ ಮಾಡಿತ್ತು)
ಉತ್ತಮ ಪ್ರಯತ್ನ.
YAARIVALU ??
GOOD WILED STORIES BUT NATURAL
ಮೇಡಂ ನಿಮಗೆ ಗೊತ್ತಿಲ್ಲ ಅಂತ ಕಾಣ್ಸುತ್ತೆ ನಿಮ್ಮ ಫೋಟೋ ಕಟ್ ಆಗಿದೆ ಮುಖ ಕಾಣಿಸ್ತಾ ಇಲ್ಲ:)
ನಿಮ್ಮ ಬ್ಲಾಗ್ ನ್ನು ಮೊದಲ ಬಾರಿ ನೋಡಿ ಪ್ರತಿಕ್ರಿಯಿಸುತ್ತಿದ್ದೇನೆ. ನಮಸ್ಕಾರ.
ಕತೆ ಬಹಳ ಸೊಗಸಾಗಿ ಸಹಜವಾಗಿ ಬೆಳೆದಿದೆ.ಕಥಾನಾಯಕಿಯ ಮನದ ಭಾವನೆಗಳಂತೂ ಅತಿ ನವಿರಾಗಿ ಎಳೆಎಳೆಯಾಗಿ ಅರಳಿವೆ.ಯಾವ ಮುಖವಾಡವೂ ಇಲ್ಲದೆ ಆ ಪಾತ್ರವನ್ನು ತುಂಬಾ ಸಂಯಮದಿಂದ ಚಿತ್ರಿಸಿದ್ದೀರಿ.ಆಳವಾಗಿ ಮನದ ಮೇಲೆ ಪರಿಣಾಮ ಬೀರುವ ಕತೆ.
ಚೆನ್ನಾಗಿದೆ, ಆದರೆ ಮೊದಲಿನಷ್ಟಲ್ಲ
ಎನಿದು ...ಬಂದು ಫಸ್ಟ್ ಬಾಲ್ಗೇ ಸಿಕ್ಸ್ ಅಮೇಲೆ ಫೊರ್ ಅಂತ ಹೊಡಿತಾ ಇದ್ದಿರಲ್ಲಾ... ಇದಕ್ಕೂ ಮುಂಚೆ ಎಲ್ಲಿ ಆಡ್ತಾ ಇದ್ರಿ..?
ಒಳ್ಳೆಯ ಬರಹ...ಹೀಗೆ ಬರ್ತಾ ಇರ್ಲಿ..
ಅಬ್ಬ ! ಏನ್ ಬಿಂಕ ಅಹಂಕಾರ ಬಿಗುಮಾನ ಕಥಾನಾಯಕಿಗೆ!
ಕಥೆ ಸಖತ್ !
ನಿಗೂಢ ಮನಸ್ಸಿನ ಚಿತ್ರವನ್ನು ಸುಂದರವಾಗಿ ನೀಡಿದ್ದೀರಿ. Good!
ಚನ್ನಾಗಿದೆ, ಮೊದಲನೆ ಕಥೆ ಇನ್ನೂ ಸೂಪರ್!!
ಎರಡು ಕಥೆಯಲ್ಲಿ ಕಂಡು ಕಾಣದ ಸೌಮ್ಯತೆಯ ಎಳೆಯಿದೆ. ಹುಡುಗಿ ಹುಡಾಗಟಕ್ಕೆ ಪ್ರೀತಿಸಿದರೂ, ನಿಸರ್ಗ ನಿಯಮ ಮೀರಕ್ಕೆ ಅಗದೆ, ಪ್ರಥಮ ಪ್ರೇಮದ ನೆನಪುಗಳ ನೆರಳಲ್ಲೆ ಹುಡುಗನ ಇಷ್ಟ ಪಡ್ತಾಳೆ ಅನ್ನೊಂದು ಕಥೆ ಹಂದರದಲ್ಲಿ ಕಾಣುತ್ತೆ. ಮುಂದಿನ ಕಥೆ ಬಗ್ಗೆ ನನಗೆ ಕುತೂಹಲ ಇದೆ, ಇದೆ ಜಾಡಿನಲ್ಲಿ ಕಥೆಗಳು ಬರುತ್ತಾ ಅಥವ ಇಲ್ಲವ ಅನ್ನೋದು.
ಮಂದಾರ,
ತುಂಬಾ ಖುಷಿಯಾಯ್ತು ಓದಿ. ಚೆನ್ನಾಗಿ ಬರೆದಿದ್ದೀರಿ.
ನಿಮ್ಮ ಕತನ ಶೈಲಿ ತುಂಬ ಇಷ್ಟ ಆಯಿತು.
kathe thumba chennag ittu! naaneno nija ankondu, nimma maile kopa bara todagitu :) nanthara kathe yendu arivaayithu :)
ಬರಹ ತುಂಬ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ;ಘಟನೆಯನ್ನು ಕಟ್ಟಿಕೊಟ್ಟ ರೀತಿ ಚೆನ್ನಾಗಿದೆ;ಹಾಗೆಯೇ ಶೀರ್ಷಿಕೆಯೂ ಇಷ್ಟವಾಯಿತು.
ತು೦ಬಾ ಮನೋಜ್ಣವಾಗಿ ಚಿತ್ರಿಸಿದ್ದೀರಿ ಮನಸ್ಸಿನ ಮುಖಗಳನ್ನು...
ನೀವು ಏಕೆ ನಿಗೂಢವಾಗಿ ಬಿಟ್ಟಿದ್ದೀರಿ?
Post a Comment