Monday, March 30, 2009

ನಾಳೆ ಬರುವ ಅವನು ನನಗೆ ಸಾಂತ್ವನವಾಗುವನೆ?

ತುಂಬ ಒರಟು ಕಣೇ ನೀನು ಎನ್ನುತ್ತಿರುತ್ತಾಳೆ ನ್ಯಾನ್ಸಿ. ಹೌದು ಕಣೆ, ನಾನಿರೋದೇ ಹೀಗೆ ಎಂದು ಹುಬ್ಬು ಹಾರಿಸಿ ಅವಳಿಗೆ ಉತ್ತರಿಸುತ್ತಿರುತ್ತೇನೆ. ಒಳಗೆ ಕುದಿವ ಲಾವಾರಸ. ಅದರ ಶಾಖಕ್ಕೆ ನಿಗಿನಿಗಿ ಕಾದು, ಎದೆಯ ಕವಾಟಗಳೆಲ್ಲ ನೀರಾಗಿ ಹರಿಯುತ್ತಿದ್ದರೂ ಹೊರಜಗತ್ತಿಗೆ ನಾನು ಒರಟಾಗಿಯೇ ಕಾಣುತ್ತೇನೆ. ಮೂಗು-ಮೂತಿ ನೀಟಾಗಿ, ಮೈ ಬಣ್ಣ ಬಿಳಿಯಾಗಿ ಇರುವುದಕ್ಕೆ ನನ್ನ ಸುತ್ತ ಯಾವಾಗಲೂ ಜನ ಜನ. ಎಳವೆಯಲ್ಲಿ ನನ್ನನ್ನು ಎತ್ತಿದವರೆಷ್ಟೋ, ಮುದ್ದಿಸಿದವರೆಷ್ಟೋ... ಹರೆಯದಲ್ಲಿ ನಡೆದದ್ದೆಲ್ಲ ಹುಡುಗರ ಪರೇಡು. ಅವರ ಕಣ್ಣುಗಳೆದುರು ನಾನು ಬಣ್ಣದ ಚಿಟ್ಟೆ. ಅವರ ಬೆನ್ನ ಹುರಿಯಲ್ಲಿ ಎದ್ದು ನಿಲ್ಲುವ ಮಿಂಚು. ಅವರ ರಾತ್ರಿ ಕನಸಿನಲ್ಲಿ ಒಂದೊಂದಾಗಿ ಬಟ್ಟೆ ಕಳಚಿಕೊಂಡು ಬೆತ್ತಲಾಗುವ ಮಾಯಾಕನ್ಯೆ. ಒರಟಳಾಗದೆ ಅಥವಾ ಒರಟಳಂತೆ ತೋರಿಸಿಕೊಳ್ಳದೆ ನಾನೇನು ಮಾಡಬಹುದಿತ್ತು?


ಅವನು ಬಂದ. ಬಂದ ಮೇಲೆ ನಾನು ನಾನಾಗಿ ಉಳಿಯಲಿಲ್ಲ. ಅವನೂ ಬೇರೆಯವರಂತೆಯೇ ಎಂದು ಭಾವಿಸಿದ್ದೆ. ಅವನು ನನ್ನ ಭಾವವನ್ನೂ ಬದಲಿಸಿದ, ಬದುಕನ್ನೂ ಬದಲಿಸಿದ. ಬದಲಾದ ನನ್ನೊಳಗೆ ಅವನು ಇಳಿಯುತ್ತಲೇ ಹೋದ, ಇಳಿದು ಇಳಿದು ನನ್ನ ಕೈಗೇ ಎಟುಕಲಾರದಷ್ಟು ಆಳಕ್ಕೆ ಸರಿದು ಹೋದ.


ಅವನು ಸಂಕೇತ. ನನ್ನ ಬಳಿ ಬಂದಾಗ ಅವನನ್ನೂ ಸುಡುಸುಡು ದೃಷ್ಟಿಯಿಂದಲೇ ಅವನನ್ನು ಬೆದರಿಸಿದ್ದೆ. ಅವನು ನನ್ನ ಎದೆಯ ಕಾವನ್ನು ತಾಳಿಕೊಂಡ. ಅವನು ನನ್ನನ್ನು ತಾಳಿಕೊಂಡಷ್ಟು ಮತ್ತಷ್ಟು ಒರಟಾಗುತ್ತ ಬಂದೆ. ಅವನು ಬದಲಾಗಲೇ ಇಲ್ಲ. ನನ್ನೆದುರು ಮಂಡಿಯೂರಿ ನಿಂತ ಅವನ ಭಾವಭಂಗಿಯಲ್ಲಿ ಕಿಂಚಿತ್ತೂ ಊನವಾಗಲೇ ಇಲ್ಲ.

ಏನವನು ನನ್ನ ದೇಹ ಬಯಸಿದ್ದನೆ? ಇದೇ ಪ್ರಶ್ನೆ ಇಟ್ಟುಕೊಂಡು ಅವನನ್ನು ಪರೀಕ್ಷೆಯ ಮೇಲೆ ಪರೀಕ್ಷೆಗೆ ಒಡ್ಡಿದೆ. ಎಲ್ಲದರಲ್ಲೂ ಅವನು ಪಾಸೋಪಾಸು. ನನ್ನ ಮನಸ್ಸು ಬಯಸಿದ್ದನೆ? ಹೌದು, ಮನಸ್ಸು ಎಂಬುದೇ ಅಮೂರ್ತವಲ್ಲವೆ? ಅದನ್ನು ಬಯಸುವುದಾದರೂ ಹೇಗೆ? ಅದನ್ನು ಗಿಟ್ಟಿಸುವುದಾದರೂ ಹೇಗೆ? ಆ ಪ್ರಶ್ನೆಗಳಿಗೇ ಉತ್ತರವಿರಲಿಲ್ಲ.


ಅವನು ನನ್ನ ಸ್ನೇಹಿತನೆ? ಅಣ್ಣನೆ? ತಂದೆಯೇ? ತಾಯಿಯೇ? ಯಾವ ಸಂಬಂಧದ ಹಣೆಪಟ್ಟಿ ಹಂಚಲಿ? ಇದೆಲ್ಲವೂ ಆಗಿ, ಅವನು ನನ್ನ ಮಡಿಲ ಮಗುವಾಗಿಯೇ ನಿಟ್ಟುಸಿರು ಬಿಡುತ್ತಿದ್ದುದು ಸತ್ಯವಲ್ಲವೆ?


``ರಮಿ, ಪ್ರೀತಿ ನಿರಪೇಕ್ಷ ಕಣೆ, ನೀನು ನನ್ನನ್ನು ಮದುವೆಯಾಗಲೇಬೇಕು ಎಂಬ ನಿರೀಕ್ಷೆಗಳೇನೂ ಇಲ್ಲ. ನಿನ್ನೆದೆಯಲ್ಲೊಂದಿಷ್ಟು ಜಾಗ ಮಾಡಿಕೊಡು ಸಾಕು. ನಿನ್ನ ನೆನಪುಗಳ ಜತೆ ಬದುಕುತ್ತೇನೆ. ನಿತ್ಯವೂ ನನ್ನೊಂದಿಗೆ ಮಾತಾಡಬೇಕು ಎಂದೇನೂ ಇಲ್ಲ. ನಕ್ಷತ್ರಗಳ ಮೂಲಕ ಸಂದೇಶ ಕಳಿಸುತ್ತೇನೆ. ಅಥವಾ ಮತ್ತೆ ಹೇಗೋ ಮಾತಾಡುತ್ತಿರುತ್ತೇನೆ.''


ಹೀಗೆ ಅವನು ಮಾತನಾಡುತ್ತಿದ್ದಾಗಲೆಲ್ಲ ನಕ್ಕು ಸುಮ್ಮನಾಗುತ್ತಿದ್ದೆ. ಆದರೆ ಆ ಮಾತುಗಳೆಲ್ಲ ನನ್ನ ಎದೆಯೊಳಗೆ ಉಳಿದು ಹೋಗಿದ್ದು ಅರಿವೇ ಆಗಲಿಲ್ಲ. ಯಾಕೆಂದರೆ ಅವನು ಅಷ್ಟು ಪ್ರಾಮಾಣಿಕವಾಗಿ ಅಷ್ಟೆಲ್ಲ ಮಾತುಗಳನ್ನು ಆಡುತ್ತಿದ್ದ.
ಹೀಗಿದ್ದೂ ಅವನನ್ನು ನಾನು ಅನುಕ್ಷಣವೂ ತಿರಸ್ಕರಿಸುತ್ತಲೇ ಬಂದೆ. ಅದು ನನ್ನ ಬುದ್ಧಿಪೂರ್ವಕವಾದ ನಿರ್ಧಾರವಾಗಿತ್ತು. ನಾನಿದ್ದ ಪರಿಸ್ಥಿತಿಯಲ್ಲಿ ಅದು ನನಗೆ ಅನಿವಾರ್ಯವೂ ಆಗಿತ್ತು ಎಂದೇ ನಾನು ಭಾವಿಸಿದ್ದೆ. ದಿನಕ್ಕೊಂದು ಕವಿತೆ ಹೊಸೆದು ಭ್ರಮೆಯ ಲೋಕದಲ್ಲಿ ಬದುಕುವವನೊಂದಿಗೆ ಬದುಕಿಡೀ ಹೆಣಗುವುದು ನನ್ನ ಪಾಲಿಗಂತೂ ಅಸಾಧ್ಯವಾಗಿತ್ತು. ನನ್ನ ತಿರಸ್ಕಾರಗಳನ್ನೂ ಅವನು ಅದೆಷ್ಟು ವಿನೀತನಾಗಿ ಸ್ವೀಕರಿಸುತ್ತಿದ್ದನೆಂದರೆ ನನ್ನ ಅಸ್ತಿತ್ವವೇ ಅಲುಗಾಡಿ, ಯಾವುದೋ ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿ ಹೋಗುತ್ತಿದ್ದೆ.


ಕಟ್ಟಕಡೆಗೆ ಅವನಿಗೂ ನನಗೂ ಅಗ್ನಿಪರೀಕ್ಷೆಯ ಕಾಲವೂ ಎದುರಾಗಿತ್ತು. ಅವನನ್ನು ಕಡೆಯ ಬಾರಿಗೆ ಪರೀಕ್ಷೆಗೆ ಒಡ್ಡಲು ನಾನು ತೀರ್ಮಾನಿಸಿದ್ದೆ. ಈ ಪರೀಕ್ಷೆ ಇಬ್ಬರ ನಡುವಿನ ಸಂಬಂಧದ ಕಡೆಯ ಚರಣವೂ ಆಗಿತ್ತು.


``ಸಂಕೇತ್, ನೀನೇ ಹೇಳ್ತಾ ಇದ್ದೆಯಲ್ಲ, ಪ್ರೀತಿ ನಿರಪೇಕ್ಷಕ, ಮದುವೆಯಾಗದೆಯೂ ನಾವು ಪ್ರೀತಿಸುತ್ತ ಇರಬಹುದು ಎಂದು. ಇವತ್ತು ಕೊನೆ. ಇನ್ನು ನಾವು ಭೇಟಿಯಾಗುವುದು ಬೇಡ. ನಾಳೆಯಿಂದ ನಿನ್ನದೊಂದು ಬದುಕು, ನನ್ನದೊಂದು ಬದುಕು. ಮನಸ್ಸಿನೊಳಗೆ ವಿಷಾದ ಬೇಡ. ಎಲ್ಲ ಸಂಬಂಧಗಳೂ ಸಾಯುವವರೆಗೆ ಬೆಸೆದುಕೊಂಡೇ ಇರಬೇಕು ಎಂದು ಬಯಸುವುದೂ ಸರಿಯಲ್ಲ. ಇಲ್ಲಿಗೆ ಇದೆಲ್ಲ ಮುಗಿಸಿಬಿಡೋಣ.''


ಅದೆಷ್ಟು ಗಟ್ಟಿ ಮನಸ್ಸು ಮಾಡಿ ಇದನ್ನು ಹೇಳಿದ್ದೆನೋ? ಅವನು ಏನೊಂದೂ ಮಾತನಾಡಲಿಲ್ಲ. ಒಮ್ಮೆ ನನ್ನ ಹೆರಳ ಮೇಲೆ ಕೈಯಾಡಿಸಿ, ನಕ್ಕು ಅಲ್ಲಿಂದ ಮರೆಯಾಗಿ ಹೋದ. ಹಾಗೆ ಹೋದವನು ಮತ್ತೆಂದೂ ಬರಲಿಲ್ಲ. ಅವನು ಹೋದ ಮೇಲೂ ನನ್ನೊಳಗೆ ಇಳಿದುಹೋದ ಅವನನ್ನು ಹುಡುಕಿಕೊಳ್ಳಲು ಯತ್ನಿಸಿದ್ದುಂಟು. ಆದರೆ ಅವನು ನನ್ನ ಕೈಗೆ ಸಿಗಲಾರದಷ್ಟು ಆಳಕ್ಕೆ ಸರಿದು ಹೋಗಿದ್ದ.


*****
ಹೊರಗೆ ಜಿಟಿಪಿಟಿ ಮಳೆ, ಆಗಾಗ ಭೋರ್ಗೆರೆಯುವ ಗಾಳಿ. ಕಣ್ಣಿಂದ ನೀರು ತಾನೇ ತಾನಾಗಿ ಹರಿದು ಹೋಗುತ್ತಿದೆ. ಮಗ್ಗುಲಲ್ಲಿ ಮಲಗಿದ ಜಿತು ತೋಳ ಮೇಲೆ ಹನಿ ಬಿದ್ದಿರಬೇಕು. ಅವನು ಎದ್ದ. ಎದ್ದವನೇ ನನ್ನ ಕಣ್ಣಿರು ಒರೆಸಿ ಏನಾಯ್ತು ಮಗಳೇ ಎಂದ. ಗಂಡನಾದರೂ ಅವನು ಆಗಾಗ ಮಗಳೇ ಎನ್ನುತ್ತಾನೆ. ಅವನ ಮಡಿಲಲ್ಲಿ ನಾನು ಮಗುವೇ ಹೌದು.


``ಅವನನ್ನು ನೋಡಬೇಕು'' ಎಂದೆ.
``ಯಾರು, ಏನು?'' ಎಲ್ಲ ವಿಚಾರಿಸಿಕೊಂಡ.
ಎಲ್ಲವನ್ನೂ ಹೇಳಿಕೊಂಡೆ.
``ಒಂದು ಫೋನ್ ಮಾಡು, ಎಲ್ಲಿದ್ದರೂ ನಾಳೆ ಒಮ್ಮೆ ಬಂದು ಹೋಗಲು ಹೇಳು'' ಎಂದ.
``ಆಯ್ತು.. ಥ್ಯಾಂಕ್ಸ್ ಕಣೋ'' ಎಂದವಳೇ ಮಗ್ಗುಲಲ್ಲಿ ಕೈಯಾಡಿಸಿದೆ. ಕಳೆದ ಮೂರು ದಿನಗಳಿಂದಲೂ ಅದು ಅಭ್ಯಾಸವಾಗಿ ಹೋಗಿದೆ.


ಆದರೇನು ಮಾಡಲಿ, ಮಗ್ಗುಲಲ್ಲಿ ಮಗುವಿರಲಿಲ್ಲ. ಮೊನ್ನೆಯಷ್ಟೆ ತೀರಿಕೊಂಡಳಲ್ಲ ಆ ಪುಟ್ಟ ಕಂದಮ್ಮ. ಎದೆಯಲ್ಲಿ ತೊಟ್ಟಿಕ್ಕುವ ಹಾಲು. ಕುಡಿಯಬೇಕಾದವಳು ಹುಟ್ಟಿದ ಒಂದೇ ದಿನಕ್ಕೆ ಮಣ್ಣಾಗಿ ಹೋದಳು. ಅವಳನ್ನು ಎಲ್ಲಿ ಹುಡುಕುವುದು?


ಮತ್ತೆ ಕಣ್ಣಲ್ಲಿ ನೀರಿನ ಧಾರೆ. ಕಣ್ಣು, ಕೆನ್ನೆ, ಎದೆ, ತೋಳೆಲ್ಲ ನೆನೆನೆನೆದು ಹೋಗಿದ್ದವು. ಜಿತುವಿನ ಕಣ್ಣುಗಳೂ ಜಿನುಗುಟ್ಟುತ್ತಿದ್ದವು.


``ಅಳಬೇಡ ಕಣೇ, ಈಗ ಮಲಗು, ನಾನಿದ್ದೇನೆ'' ಎಂದು ಹೇಳಿ ತೋಳಮೇಲೆ ಎಳೆದುಕೊಂಡು ಮಲಗಿಸಿಕೊಂಡ. ಅವನ ತೋಳ ಶಕ್ತಿಯೇ ಅಂಥದ್ದು. ಎಲ್ಲ ನೋವನ್ನು ನೀಗಿಸುವಂಥದ್ದು. ಆದರೂ ನಿದ್ದೆ ಬರುತ್ತಲೇ ಇಲ್ಲ.


ನಾಳೆ ಬರುವ ಅವನು ನನಗೆ ಸಾಂತ್ವನವಾಗುವನೆ? ಅವನ ಕಣ್ಣೊಳಗೆ ಕಳೆದು ಹೋದ ನನ್ನ ಮಗಳು ದಕ್ಕುವಳೇ?


ಗೊತ್ತಿಲ್ಲ.

11 comments:

shivu said...

ಮಂದಾರ ಮೇಡಮ್,

ತುಂಬಾ ಚೆನ್ನಾಗಿದೆ ಬರಹ...ಮೊದಲಿನ ಮತ್ತು ಎರಡನೇ ಬರಹದಂತೆ ತುಂಬಾ ಗಾಡವಾಗಿ ಕಾಡುವಂತದ್ದು. ಎಲ್ಲಿ ಹೋಗಿದ್ರಿ ಇಷ್ಟು ದಿನ ನಿಮ್ಮ ಬ್ಲಾಗಿ ಲಿಂಕಿಸಿಕೊಂಡು ಹಿಂಬಾಲಿಸುತ್ತಿದ್ದೆ ತೆಗೆದು ಹಾಕದೇ...ಹೀಗೆ ಬರೆಯುತ್ತಿರಿ...

ಮತ್ತೆ ನನ್ನ ಬ್ಲಾಗಿನಲ್ಲೂ ಇದೇ ರೀತಿಯ ನನ್ನ ಸ್ವಂತಕತೆಯ ಲೇಖನವನ್ನು ಬರೆದಿದ್ದೇನೆ...ಸಾದ್ಯವಾದರೆ ಓದಿ..ಅಭಿಪ್ರಾಯ ತಿಳಿಸಿ...
http://chaayakannadi.blogspot.com/2009/03/blog-post_22.html
ಧನ್ಯವಾದಗಳು...

Pramod said...

Nice story! :)

Anonymous said...

ಮಂದಾರ ... ನಿಮ್ಮ ಹೆಸರೇ ಎಷ್ಟು ಚೆಂದ ಇದೆ... ಗಾಢವಾದ ನೋವನ್ನು ಕಟ್ಟಿ ಕೊಡುವ ಇಂಥ ಬರಹಗಳನ್ನು ಚೆಂದ ಇದೆ
ಎನ್ನುವುದು ಹೇಗೆ.. ಹೇಳದಿರುವುದು ಹೇಗೆ ? ನಿಮ್ಮ ಮಡಿಲಲ್ಲಿ ಮನದಲ್ಲಿ ಚಂದದೊಂದು ಮಂದಾರ ಅರಳಲಿ ಎಂದಷ್ಟೇ ಹೇಳಬಲ್ಲೆ..

ಶಮ ನಂದಿಬೆಟ್ಟ

ಶಿವಪ್ರಕಾಶ್ said...

ಮಂದಾರ ಅವರೇ,
ನಿಮ್ಮ ಲೇಖನಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ, ನಿಮ್ಮ ಮೊದಲೆರಡು ಲೇಖನಗಳು ನನಗೆ ತುಂಬಾ ತುಂಬಾ ಇಸ್ಟವಾಗಿದ್ದವು.
ಬಹಳ ದಿನಗಳಿಂದ ನೀವು ಯಾವುದೇ ಲೇಖನವನ್ನು ಪೋಸ್ಟ್ ಮಾಡದೇ ಇದ್ದುದ್ದನ್ನು ನೋಡಿ, ನೀವು ಬ್ಲಾಗ್ ಲೋಕಕ್ಕೆ ವಿದಾಯ ಹೇಳಿಬಿಟ್ಟಿರೆನೋ ಎಂದು ಭಯ ಪಟ್ಟಿದ್ದೆ..
ಉತ್ತುಮ ಲೇಖನದೊಂದಿಗೆ ಮರಳಿ ಬಂದಿದ್ದಕ್ಕೆ ಅಭಿನಂದನೆಗಳು...

ನಿಮ್ಮ ಈ ಲೇಖನ ತುಂಬಾ ಭಾವಪುರ್ಣವಾಗಿದೆ. ಮನಸನ್ನು ಕಲಕುವಂತಿದೆ...
ಓದಿದವರಿಗೆ ಇದು ಕಥೆಯೋ ಅಥವಾ ವಾಸ್ತವವೋ ಎನ್ನುವ ಪ್ರೆಶ್ನೆ ಮೂಡುತ್ತದೆ..
ಇದು ನಿಜ ಘಟನೆಯಾಗಿದ್ದಲ್ಲಿ, ಮನಸಿಗೆ ತುಂಬಾ ನೋವಾಗುತ್ತದೆ..

ಧನ್ಯವಾದಗಳು...

sunaath said...

ಮಂದಾರರವರೆ,
ತುಂಬಾ ಭಾವಪೂರ್ಣ ಕತೆಯನ್ನು ಕೊಟ್ಟಿರುವಿರಿ. ಅಭಿನಂದನೆಗಳು.

ಚಂದ್ರಕಾಂತ ಎಸ್ said...

ಹಿಂದಿನ ನಿಮ್ಮ ಬರಹ ಇನ್ನೂ ನನ್ನ ಮನದಲ್ಲಿ ಆಳವಾಗಿ ಉಳಿದಿದೆ. ಈ ಕತೆಯೂ ಅಷ್ಟೇ ಸಾಂದ್ರವಾಗಿ ಮೂಡಿಬಂದಿದೆ. ನೀವು ಅಪರೂಪಕ್ಕೆ ಬರೆದರೂ ಅಷ್ಟು ದಿನಗಳ ಕಾಲ ಈ ವಸ್ತು ನಿಮ್ಮ ಮನದಲ್ಲೇ ದಟ್ಟವಾಗಿ ಅರಳುವ ಕ್ರಿಯೆ ನಡೆಸುತ್ತಿರುತ್ತದೆ ಅನಿಸುತ್ತದೆ.ಬಹಳ ಸೊಗಸಾದ ಮನಸಿನಾಳಕ್ಕೆ ಇಳಿಯುವ ಕತೆ

Lakshmi S said...

kathe nijvaaglu kaaDatte ...hindina katheyashte super aagide idu nu.

Lakshmi S said...

kathe nijvaaglu kaaDatte ...hindina katheyashte super aagide idu nu.

Sharath Akirekadu said...

ಮಂದಾರ,
ಅದ್ಭುತವಾದ ಕಥೆ..ಮನಸ್ಸು ಕೊಳ್ಳೆ ಹೊಡೆಯಿತು.ಅದು ಹೇಗೆ ಇಷ್ಟು ಭಾವನಾತ್ಮಕವಾಗಿ ಬರೆಯುತ್ತೀರಿ.ಹೊಟ್ಟೆಕಿಚ್ಚು ಆಗ್ತಾ ಇದೆ.ಪ್ರಥಮವಾಗಿ ನಿಮ್ಮ ಬ್ಲೊಗ್ ಗೆ ಬಂದೆ.ಬಹಳ ಖುಶಿ ಅಯ್ತು.ಹೀಗೆ ಬರೆಯುತ್ತಾ ಇರಿ..ನಾನಂತು ಬರ್ತಾ ಇರ್ತಿನಿ..

ಪ್ರೀತಿಯಿಂದ,
ಶರತ್.ಎ

RP said...

ನಿಮ್ಮ ಬರಹಗಳು ಭಾವನಾತ್ಮಕವಾಗಿ ಹೃದಯಕ್ಕೆ ತಾಕುತ್ತವೆ. ಒಂದು ವೇಳೆ ನೀವೇ ಈ ಸ್ಥಿತಿಯಲ್ಲಿದ್ದರೆ ನನ್ನ ವಿಷಾದವಿದೆ. ಹೀಗೆ ನಿಮ್ಮ ಬ್ಲಾಗ್ ನಲ್ಲಿ ಬರಹಗಳು ಮೂಡಿ ಬರುತ್ತಿರಲಿ.

hanamantha said...

excellent writing