Wednesday, October 22, 2008

ಅವನು ಸತ್ತ ಮೇಲೆ ನಾನು ಸಿಂಧೂರ ಧರಿಸುತ್ತಿಲ್ಲ

ಮಾತಾಡ್ತಾನೇ ಇರ್‍ತೀನಿ. ಮಾತಾಡ್ತಾನೇ ಇರ್‍ತೀನಿ. ನಾನಿರೋದೇ ಹೀಗೆ. ಏನನ್ನು ಮಾತಾಡ್ತೀನಿ, ಹೇಗೆ ಮಾತಾಡ್ತೀನಿ ಅಂತ ನನಗೇ ಗೊತ್ತಾಗದಷ್ಟು ಮಾತಾಡ್ತೀನಿ. ಅಮ್ಮ ಆಗಾಗ ಹೇಳ್ತಾ ಇರ್‍ತಾಳೆ: ಕತ್ತೆ ಉಚ್ಚೆ ಹೊಯ್ದಂಗೆ ಮಾತಾಡ್ತೀಯಲ್ಲೇ ಅಂತ, ಹಂಗೆ ಮಾತಾಡ್ತಾ ಇರ್‍ತೀನಿ.

ಚಿಕ್ಕವಳಿದ್ದಾಗ ಅಪ್ಪ, ಅಮ್ಮ ಬಾಯಿ ಕಟ್ಟಿ ಹಾಕಿದ್ದರ ಪರಿಣಾಮವಿದು. ಅಪ್ಪ ಊರಿನ ಎಲ್ಲರ ಮನೆಯ ಮದುವೆ, ಶ್ರಾದ್ಧ, ಮುಂಜಿ, ಪುಣ್ಯ ಇತ್ಯಾದಿಗಳಿಗೆ ಜೋಳಿಗೆ ಕಟ್ಟಿಕೊಂಡು ಹೊರಟುಬಿಡುತ್ತಿದ್ದರು. ಪಾಪ, ಅವರಿಗೆ ದಕ್ಷಿಣೆ ಕಾಸಿನದೇ ಚಿಂತೆ. ಯಾರ ಮನೆಯಲ್ಲಾದರೂ ಕಾಸು ಸರಿಯಾಗಿ ಗಿಟ್ಟಲಿಲ್ಲವೆಂದರೆ ನನಗೂ, ಅಮ್ಮನಿಗೂ ರೇಗುತ್ತಿದ್ದರು. ಬಾಯಿ ಮುಚ್ಚಿಕೊಂಡು ಇರ್ರೇ.. ಪಾಪಿ ಮುಂಡೇವಾ... ಎಂದು ಗಂಟಲು ಹರಿಯುವಂತೆ ಕಿರುಚುತ್ತಿದ್ದರು. ನನಗಂತೂ ಯಾಕೆ ಹುಟ್ಟಿದ್ಯೇ ಪೀಡೆ ಅಂತನೇ ಜರಿಯುತ್ತಿದ್ದರು.

ದೊಡ್ಡವಳಾದ ಮೇಲಂತೂ ನನ್ನನ್ನು ಒಂದು ಹೇಸಿಗೆ ಅನ್ನೋ ಹಂಗೇ ನೋಡ್ತಿದ್ದರು ಅಪ್ಪ. ಅದರಲ್ಲೂ ತಿಂಗಳ ಮೂರು ದಿನ ಯಾವುದೋ ಪಿಶಾಚಿ ಮನೆಯಲ್ಲಿದೆಯೇನೋ ಅನ್ನುವಂತೆ ವರ್ತಿಸುತ್ತಿದ್ದರು. ಅದಾದ ಮೇಲೆ ಒಂದು ವಿನಾಕಾರಣದ ಪ್ರೀತಿ ಹುಟ್ಟಿಕೊಂಡ ಮೇಲೆ ನಾನು ಬದಲಾಗುತ್ತ ಹೋದೆ. ವಡ್ಡರ ಹುಡುಗ ರವಿರಾಜ ನನ್ನನ್ನು ಆಕರ್ಷಿಸಿದ್ದು ಹೇಗೆ ಎಂಬುದು ನನಗೆ ಇನ್ನೂ ದೊಡ್ಡ ವಿಸ್ಮಯ. ನಾನು ಅವನ ವಿಶಾಲವಾದ ತೋಳುಗಳಿಗೆ ಮರುಳಾದೆನೆ? ಅಪ್ಪ, ಚಿಕ್ಕಪ್ಪಗಳ ಪೀಚಲು ದೇಹಗಳನ್ನಷ್ಟೆ ನೋಡಿದ್ದ ನಾನು ರವಿರಾಜನ ಸದೃಢವಾದ ಮೈಕಟ್ಟನ್ನು ನೋಡಿ ಆಕರ್ಷಿತಳಾದೆನೆ? ಗೊತ್ತಿಲ್ಲ.

ಅಪ್ಪ ಮಾತೆತ್ತಿದರೆ ಧರ್ಮ, ಸಂಸ್ಕೃತಿ, ಮಡಿ, ಮೈಲಿಗೆ, ಸ್ವರ್ಗ, ನರಕ, ಸಂಸ್ಕಾರ ಎನ್ನುತ್ತಿದ್ದರು. ಅದು ಆಗ ನನಗೇನೂ ಅರ್ಥವಾಗುತ್ತಿರಲಿಲ್ಲ. ಅಪ್ಪ ನಮ್ಮೂರಿನ ಕೆಲ ಶೂದ್ರ ಹುಡುಗರನ್ನೂ ತಲೆಕೆಡಿಸುವ ಕೆಲಸ ಮಾಡುತ್ತಿದ್ದರು. ಈ ಹುಡುಗರ ಪೈಕಿ ನನ್ನ ರವಿರಾಜನೂ ಇದ್ದ. ಯಾವುದೋ ಪ್ರಾರ್ಥನಾ ಮಂದಿರದ ಗಲಾಟೆ ನಡೆಯುತ್ತಿದ್ದ ಕಾಲ. ನಮ್ಮ ಧರ್ಮಕ್ಕೆ ಧಕ್ಕೆ ಬಂದಿದೆ, ರಕ್ಷಿಸಿಕೊಳ್ಳಬೇಕು ಎಂದು ಅಪ್ಪ ನಮ್ಮೂರಿನ ಹುಡುಗರಿಗೆಲ್ಲ ತಲೆಕೆಡಿಸಿದ್ದ.

ನಾನು ರವಿರಾಜನಿಗೆ ಇದೆಲ್ಲ ಬಿಟ್ಟುಬಿಡು, ಹೇಗಿದ್ದರೂ ನಮ್ಮಪ್ಪ ನಮ್ಮಿಬ್ರಿಗೂ ಮದುವೆ ಮಾಡಲ್ಲ. ಎಲ್ಲಾದರೂ ದೂರ ಓಡಿಹೋಗೋಣ ಎನ್ನುತ್ತಿದ್ದೆ. ಆಯ್ತು ಮದುವೆಯಾಗೋಣ, ಅದಕ್ಕೂ ಮುನ್ನ ನಾನು ನನ್ನ ಧರ್ಮ ಉಳಿಸಿಕೊಳ್ಳಬೇಕಾಗಿದೆ ಎನ್ನುತ್ತಿದ್ದ ಅವನು. ಹಾಗೆ ಹೇಳಿದಾಗ ನನಗೆ ನಗು ಬರುತಿತ್ತು. ನಮ್ಮ ಜಾತಿಯವರಲ್ಲದೆ ಬೇರೆಯವರ ಮನೆಯಲ್ಲಿ ಕಾಲಿಡಬಾರದು ಎಂದು ಹೇಳಿ ನನ್ನನ್ನು ಬೆಳೆಸಿದವನು ನನ್ನಪ್ಪ. ನಾವು ಶ್ರೇಷ್ಠರು, ಉಳಿದವರೆಲ್ಲ ನಮ್ಮ ಸೇವೆ ಮಾಡಿಕೊಂಡಿರಬೇಕು ಎನ್ನುತ್ತಿದ್ದ. ಅದರಲ್ಲೂ ರವಿರಾಜನ ಜತೆ ನಾನು ಓಡಾಡಿದ್ದನ್ನು ಕೇಳಿದ ಮೇಲಂತೂ ಅಪ್ಪ ಬಾರುಕೋಲು ತೆಗೆದುಕೊಂಡು ಬಾಸುಂಡೆ ಬರುವಂತೆ ಹೊಡೆದಿದ್ದ. ರವಿರಾಜ ಯಾವ ಧರ್ಮದಲ್ಲಿ ಪ್ರಾಣಿಗಿಂತ ಕಡೆಯಾಗಿದ್ದನೋ ಆ ಧರ್ಮವನ್ನೇ ಉಳಿಸಲು ಹೊರಟಿದ್ದ.
ಇದಾದ ಕೆಲ ದಿನಗಳಲ್ಲೇ ರವಿರಾಜ ತನ್ನ ಧರ್ಮರಕ್ಷಣೆ ಕಾರ್ಯಕ್ಕೆ ದೂರದ ಊರಿಗೆ ಹೋದ. ಯಾವುದೋ ಒಂದು ಪ್ರಾರ್ಥನಾ ಮಂದಿರ ಒಡೆದು ಮತ್ತೊಂದನ್ನು ಕಟ್ಟುವ ಕಾರ್ಯವಂತೆ. ಇವನು ಪ್ರಾರ್ಥನಾ ಮಂದಿರದ ಕಟ್ಟಡ ಒಡೆಯುತ್ತಿದ್ದಾಗ ಪೊಲೀಸರ ಗುಂಡು ತಾಕಿ ಸತ್ತೇ ಹೋದನಂತೆ. ಅವನ ಹೆಣವನ್ನು ನೋಡುವ ಅವಕಾಶವೂ ನನಗೆ ಸಿಗಲಿಲ್ಲ. ಯಾವುದೋ ನದಿಯಲ್ಲಿ ಹೆಣ ತೇಲಿ ಹೋಯಿತಂತೆ.

ಒಂದು ವಾರ ನಾನು ಏನನ್ನೂ ತಿನ್ನಲಿಲ್ಲ. ಬರೀ ಅಳುತ್ತಲೇ ಕುಳಿತಿದ್ದೆ. ಒಂದು ದಿನ ಹೊರಗೆ ಹೋಗಿದ್ದವಳು ಮನೆಯೊಳಗೆ ಬಂದಾಗ ಅಪ್ಪ ಅಮ್ಮಳಿಗೆ ಹೇಳುತ್ತಿದ್ದುದನ್ನು ಕದ್ದು ಕೇಳಿಸಿಕೊಂಡೆ: ನೋಡ್ದೇನೇ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದೆ. ನಿನ್ನ ಮಗಳು ಬೋಳಿಮುಂಡೆ ನೀಚ ಜಾತಿಯವನ ಜತೆ ಸ್ನೇಹ ಮಾಡಿದ್ದಳು. ಓಡಿಹೋಗಿದ್ದರೆ ನಮ್ಮ ಮರ್ಯಾದೆ ಗತಿಯೇನು ಅಂತ ಯೋಚನೆಯಾಗಿತ್ತು. ಅದಕ್ಕೆ ಅವನನ್ನು ಮಂದಿರದ ಗಲಾಟೆಗೆ ಕಳಿಸಿದೆ. ಈಗ ಅವನು ಸತ್ತೇ ಹೋದ. ಅವನ ಹೆಣದ ಜತೆ ಮದುವೆಯಾಗ್ತಾಳಾ ಕಳ್ಳ ಲೌಡಿ? ಎನ್ನುತ್ತಿದ್ದ ಅವನು.

ಹೀಗೆ ನನ್ನಲ್ಲಿ ಹುಟ್ಟಿಕೊಂಡಿದ್ದ ಪ್ರೀತಿಯನ್ನು ನಿರ್ದಯವಾಗಿ ನಮ್ಮಪ್ಪನೇ ಕೊಂದ ಮೇಲೆ ನನಗೆ ಉಳಿದಿದ್ದ ದಾರಿಯಾದರೂ ಏನು? ಅಪ್ಪ ನೋಡಿದ ಹುಡುಗನನ್ನೇ ಮದುವೆಯಾದೆ. ಮದುವೆಯಾದವನೊಂದಿಗೆ ಬಾಳಲು ಸಾದ್ಯವಾಗದೆ ಅವನನ್ನು ಬಿಟ್ಟೆ.
ಈಗ ಬದುಕಬೇಕು, ಅದಕ್ಕಾಗಿ ಯಾವುದೋ ಮಠ ಸೇರಿಕೊಂಡಿದ್ದೇನೆ. ಮಠ ಸೇರಿಕೊಂಡ ಒಂದು ವಾರಕ್ಕೆ ಮಠದ ಸ್ವಾಮಿ ನನ್ನು ಹುರಿದು ತಿಂದ. ವಾರಕ್ಕೊಮ್ಮೆ ನನ್ನ ಸೇವೆ ಬೇಕೇ ಬೇಕಂತೆ ಅವನಿಗೆ. ಈ ಸ್ವಾಮೀಜಿಗೂ ನನ್ನಪ್ಪನಿಗೂ ಅಷ್ಟೊಂದು ವ್ಯತ್ಯಾಸವಿಲ್ಲ. ಇವನೂ ಧರ್ಮರಕ್ಷಣೆ ಅದೂ ಇದೂ ಎನ್ನುತ್ತಿರುತ್ತಾನೆ. ಮಠದ ತುಂಬ ಕೆಲವು ಹೆಣ್ಣುಗಳಿದ್ದಾವೆ. ಅವುಗಳಿಗೆ ಈ ಸ್ವಾಮಿಯ ಜತೆಗಿನ ಸಂಬಂಧ ದೇಹಬಾಧೆ ತೀರಿಸುವುದಿಲ್ಲ. ಬೇರೆ ಗಂಡಸರೊಂದಿಗೆ ಸೇರುವುದನ್ನು ಸ್ವಾಮಿ ಸಹಿಸುವುದಿಲ್ಲ. ಅದಕ್ಕಾಗಿ ಈ ಹೆಂಗಸರು ಅವರವರೇ ತಬ್ಬಿಕೊಂಡು ಮಲಗಿಕೊಳ್ಳುತ್ತಾರೆ. ನನ್ನ ಜತೆಯೂ ಇದೆಲ್ಲ ನಡೆಯಿತು. ಮೊದಮೊದಲು ಅಸಹ್ಯ ಎನಿಸಿದರೂ ಈಗ ಅದೂ ನನಗೆ ಅಭ್ಯಾಸವಾಗಿದೆ.

ಮಠದ ಸ್ವಾಮಿ ಒಂದು ಪತ್ರಿಕೆ ಹೊರತರುತ್ತಾನೆ. ಅದರಲ್ಲಿ ನಾನು ಏನಾದರೂ ಬರೆಯಲೇಬೇಕು. ಮನಸ್ಸಿಗೆ ಅನಿಸಿದ್ದನ್ನೇ ಬರೆಯಲು ಸಾಧ್ಯವೆ? ಹಾಗೇನಾದರೂ ಬರೆದರೆ ಸ್ವಾಮಿ ನನ್ನನ್ನು ಹೊರಗೆ ಕಳಿಸುತ್ತಾನೆ. ಅದಕ್ಕಾಗಿ ನಾನೂ ಸಹ ಧರ್ಮರಕ್ಷಣೆಯ ಬಗೆ ಬರೆಯಲು ಆರಂಭಿಸಿದೆ. ನನಗೆ ಗೊತ್ತು, ನಾನು ಮಾಡುತ್ತಿರುವುದು ಅಕ್ಷರ ಹಾದರ ಅಂತ. ಆದರೇನು ಮಾಡುವುದು? ಹಾದರವನ್ನೇ ಮಾಡಿದವಳಿಗೆ ಅಕ್ಷರ ಹಾದರ ಮಾಡುವುದು ಕಷ್ಟದ ಕೆಲಸವೇ?

ಒಂದು ವಿಷಯ ಮರೆತೆ. ನನ್ನನ್ನು ಮಠಕ್ಕೆ ಸೇರಿಸಿದವರು ಇಬ್ಬರು ಗೆಳೆಯರು. ಅವರೂ ಸಹ ಈ ಸ್ವಾಮಿಯ ಜತೆಗಾರರೇ. ಸ್ವಾಮಿಯ ಜತೆ ಸೇರಿಸಿದ ಕೃತಜ್ಞತೆಗಾಗಿ ನಾನು ಅವರಿಗೆ ಆಗಾಗ ಆಹಾರವಾಗುತ್ತಿರುತ್ತೇನೆ.
ಇದೆಲ್ಲ ಹಿಂಸೆಯ ನಡುವೆ ನನಗೆ ನನ್ನ ಹುಡುಗ ರವಿರಾಜ ನೆನಪಾಗುತ್ತದೆ. ಅವನ ದಷ್ಟಪುಷ್ಟ ತೋಳುಗಳು ನೆನಪಾಗುತ್ತವೆ. ಸ್ವಾಮಿ ಮತ್ತವನ ಗೆಳೆಯರು ನನ್ನನ್ನು ಆಕ್ರಮಿಸಿಕೊಳ್ಳುವಾಗ ರವಿರಾಜನನ್ನೇ ನೆನಪಿಸಿಕೊಳ್ಳುತ್ತೇನೆ. ಹಾಗಾಗಿ ಈ ಮಿಲನದ ಕ್ರಿಯೆಯೂ ನನಗೆ ಒಂದು ಬಗೆಯ ತೃಪ್ತಿ ತರುತ್ತದೆ.

ರವಿರಾಜ ಅಪ್ಪನ ಚಿತಾವಣೆಯಿಂದ ಕಡೆ ಕಡೆಗೆ ಹಣೆಯ ತುಂಬ ಉದ್ದ ಸಿಂಧೂರ ಧರಿಸುತ್ತಿದ್ದ. ಅದನ್ನು ನೋಡಿದರೆ ತುಂಬ ಭಯವಾಗುತ್ತಿತ್ತು. ಆ ಸಿಂಧೂರವೇ ಅವನನ್ನು ಸಾವಾಗಿ ಕಾಡಲಿದೆ ಎಂದು ಅವನು ಎಣಿಸಿರಲಿಲ್ಲ ಅನಿಸುತ್ತದೆ. ಅವನು ಸತ್ತ ಮೇಲೆ ನಾನು ಸಿಂಧೂರ ಧರಿಸುತ್ತಿಲ್ಲ.

24 comments:

ತೇಜಸ್ವಿನಿ ಹೆಗಡೆ said...

ಮಂದಾರ,

ಬ್ಲಾಗ್ ಪ್ರಪಂಚಕ್ಕೆ ಒಂದು ಉತ್ತಮ ನಿರೂಪಣಾ ಶೈಲಿಯನ್ನೊಳಗೊಂಡ ಕಥೆಯೊಂದಿಗೆಯೇ ಪ್ರವೇಶಿಸಿದ್ದೀರಿ. ತುಂಬಾ ಸಂತೋಷ. ಕಥೆಯ ಓಘ, ನಿರೂಪಣೆ, ವಸ್ತು ತುಂಬಾ ಗಟ್ಟಿಯಾಗಿವೆ... ಇಷ್ಟವಾದವು. ಆದರೆ ಕಥೆಯೊಳಗಿನ ದ್ವಂದ್ವ ತುಸು ಕಿರಿ ಕಿರಿಯನ್ನುಂಟುಮಾಡುವುದು! (ಇದು ನನ್ನ ಅಭಿಪ್ರಾಯವಷ್ಟೇ!). ಬರವಣಿಗೆ ಹೀಗೇ ಸಾಗುತ್ತಿರಲಿ.

-ತೇಜಸ್ವಿನಿ.

sham said...

ಕತೆ ಓದಿಸಿಕೊಂಡು ಓಡಿಸಿಕೊಂಡು ಹೋಗುತ್ತದೆ. ಕುತೂಹಲಕಾರಿ ಬರಹಣಿಗೆಯ ಕತೃವಿಗೆ ಶುಭಾಶಯ. ಈ ಬರಹವನ್ನು ನಮ್ಮ ವೆಬ್ ಪುಟಗಳಲ್ಲಿ ಮುದ್ರಿಸಲು ಇಷ್ಟ. ಅಪ್ಪಣೆ ಕೊಡುತ್ತೀರಾ? Sham,
http://thatskannada.oneindia.in

shami.sk@greynium.com

Ramesh BV (ಉನ್ಮುಖಿ) said...

ಮಂದಾರ ಅವರೇ,

ನೀವು ಕೊಟ್ಟ ಆಹ್ವಾನದ ಮೇಲೆ ಬಂದು ಓದಿದೆ..
ಬ್ಲಾಗ್ ಹೊಸದಾಗಿ ಆರಂಬಿಸಿದ್ದರೂ ಬರವಣಿಗೆಯ ಅಬ್ಯಾಸ ಇದ್ದಂತೆಯೇ ಬರೆದ್ದಿದ್ದೀರಿ..

ಬ್ಲಾಗಿಗ ಆರಿಸಿಕೊಳ್ಳುವ ವಿಷಯ ಮತ್ತು ಅದನ್ನು ವಿಸ್ತರಿಸುವ ರೀತಿ ಅವನ/ಳ ಇಷ್ಟ. ಲೇಖನವನ್ನು ಓದಿದ್ದನ್ನು ಮುಗಿಸಿದ ನಂತರ ಅನಿಸಿದ್ದು, ನೀವೇ ಪ್ರಸ್ತಾಪಿಸಿರುವಂತೆ ಅಕ್ಷರ ಹಾದರ ಎಂದು.

ಬೇರೆ ತರಹದ ವಿಷಯಗಳೂ ಹರಿದುಬರಲಿ :)

ಧನ್ಯವಾದ
ರಮೇಶ್

ಸಂಭವಾಮಿ ಯುಗೇ ಯುಗೇ said...

ದಾರಾಳವಾಗಿ ಬಳಸಿಕೊಳ್ಳಬಹುದು.

suragi \ ushakattemane said...

ನಿಮ್ಮದು ಅದ್ಬುತವಾದ ಶೈಲಿ ಮಂದಾರ.
ಬರಹದ ವಸ್ತು, ಆಶಯ, ಒಳನೋಟ,ಬಂಧ ನೋಡಿದರೆ ಇದು ಪಳಗಿದ ಲೇಖನಿ ಅನ್ನಿಸುತ್ತಿದೆ.
ನಿಮಗೆ ಒಳಿತಾಗಲಿ.

sunaath said...

ಮಂದಾರ,
ಒಂದು ಪ್ರಸ್ತುತ ವಿವಾದದ ಬೇರೊಂದು ಮುಖವನ್ನು ಸುಂದರವಾಗಿ ಚಿತ್ರಿಸಿದ್ದೀರಿ. ಅಭಿನಂದನೆಗಳು.

Harisha - ಹರೀಶ said...

ಸೂಪರ್! ಅತ್ಯುತ್ತಮ ಕಥೆಯೊಂದಿಗೆ ಬ್ಲಾಗ್ ಲೋಕಕ್ಕೆ ಬಂದಿದ್ದೀರಿ. ಇದು ಸದಾ ಹೀಗೇ ಮುಂದುವರೆಯಲಿ. ಶುಭಾಶಯಗಳು.

bhadra said...

ಹುಂ! ೩೦ ವರ್ಷಗಳ ಹಿಂದೆ ಓದಿದ ಸಂಸ್ಕಾರ ಮತ್ತು ಭಾರತೀಪುರ ಕಾದಂಬರಿಗಳ ನೆನಪಾಯ್ತು. ಇನ್ನೂ ಸುದೀರ್ಘ ವಿವರಣೆಯುಕ್ತವಾಗಿ ಬರೆಯಿರಿ. ಬರಹದಲ್ಲಿ ಸಾಮಾಜಿಕ ಪ್ರಜ್ಞೆ ಇದ್ದು, ಬಹಳ ಒಳ್ಳೆಯ ಬರಹಗಾರ್ತಿಯ ಲಕ್ಷಣ, ಮಂದಿಯ ಜ್ಞಾನೋದಯ ಮಾಡುವಲ್ಲಿ ಸಫಲವಾಗುವಿರಿ.

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

shivu.k said...

ಮಂದಾರ ಮೇಡಮ್, ಬ್ಲಾಗಿನಿಂದ ಬ್ಲಾಗಿಗೆ ಹಾರುತ್ತಿದ್ದ ನನ್ಗೆ ಅಚಾನಕ್ಕಾಗಿ ಇಲ್ಲಿ ಇಣುಕಿದಾಗ ಅರೆರೆ ಇದೇನಿದು ಈ ರೀತಿ ಇದೆಯಲ್ಲ ನಿರೂಪಣೆ ಅನ್ನಿಸಿತು.
ಕ್ರಿಕೆಟ್ ನೋಡಲಿಕ್ಕ್ದೆ ಕುಳಿತಾಗ ದಾಂಡಿಗ ಮೊದಲ ಎಸೆತದಲ್ಲೆ ಸಿಕ್ಸ್ರರ್ ಎತ್ತಿದಂತೆ ಆಯ್ತು. ಎಷ್ಟು ನೇರವಾಗಿ ಬರೆದಿದ್ದೀರಿ. ವಸ್ತು ಮತ್ತು ಸ್ಥಿತಿ ತುಂಬ ತೂಕವುಳ್ಳದ್ದು. ಮತ್ತು ಕುತೂಹಲಕಾರಿಯಾದದ್ದು. ಅಭಿನಂದನೆಗಳು ಇನ್ನೂ ಹೀಗೆ ಹರಿತವಾದದ್ದು ಬರುತ್ತಿರಲಿ !

ನೀವು ನನ್ನ ಬ್ಲಾಗಿಗೊಮ್ಮೆ ಬನ್ನಿ. ಅಲ್ಲಿ ನಾಚಿಕೆಯಿಲ್ಲದ ಪಾರಿವಾಳ ಕುಟುಂಬ ಬಂದಿದೆ. ಬನ್ನಿ ಪ್ರತಿಕ್ರಿಯಿಸಿ.
http://chaayakannadi.blogspot.com/
ಮತ್ತೊಂದು ಆಶ್ಚರ್ಯಕ್ಕಾಗಿ ಬೇಟಿ ಕೊಡಿ:
http://camerahindhe.blogspot.com/

NilGiri said...

ವಿಭಿನ್ನ ಶೈಲಿಯಲ್ಲಿ ಕಥೆಯನ್ನು ಬಹು ಚೆನ್ನಾಗಿ ಹೆಣೆದಿದ್ದೀರಿ. ಮೊದ ಮೊದಲು ಓದಲು ಕಸಿವಿಸಿಯೆನಿಸಿದ್ದಂತೂ ನಿಜ! ಬ್ಲಾಗ್ ಲೋಕಕ್ಕೆ ಸ್ವಾಗತ.

shivu.k said...
This comment has been removed by the author.
ಸಂದೀಪ್ ಕಾಮತ್ said...

ನಿಮ್ಮ ಬ್ಲಾಗು ಬೇಗ ಪ್ರಸಿದ್ಧಿ ಆಗುತ್ತೆ ನೋಡ್ತಾ ಇರಿ:)
ಚೆನ್ನಾಗಿ ಬರೀತೀರಾ ನೀವು.ಬ್ಲಾಗ್ ಹೊಸದಾಗಿದ್ರೂ ನೀವು ಮಾತ್ರ ಬರವಣಿಗೆಗೆ ಹೊಸಬರಲ್ಲ ಅನ್ನೋದು ಗೊತ್ತಾಗುತ್ತೆ ನಿಮ್ಮ ಬರಹದ ಶೈಲಿ ನೋಡಿ.

ಚಂದಿನ | Chandrashekar said...

ಹುಶ್...ಉಸಿರುಗಟ್ಟಿ ಓದಿಸಿಕೊಂಡಿತು.

ಇಲ್ಲಿಯವರೆಗೂ ಎಲ್ಲಿದ್ದಿರಿ?

- ಚಂದಿನ

Unknown said...

ಬ್ಲಾಗ್ ಲೋಕಕ್ಕೆ ಸ್ವಾಗತ. ತುಂಬಾ ಚೆನ್ನಾಗಿ ಬರೆದಿದ್ದೀರಿ. ಇಂಥ ಮತ್ತಷ್ಟು ಬರಹಗಳು ಬರಲಿ, ಬರುತ್ತಿರಲಿ..

minugutaare said...

ಕನ್ನಡಪ್ರಭ website blogaayana ದಲ್ಲಿ ನಿಮ್ಮ ಬ್ಲಾಗ್....

Unknown said...

wow
Nice
story
http://shreeshum.blogspot.com

Unknown said...

ನಾನು ಒಬ್ಬ ಗೆಳತಿಯ ಬ್ಲಾಗಿನಲ್ಲಿ ಓದಿದ ಕತೆಗೆ ಪರ್ಯಾಯದಂತಿದೆ.
-ಶ್ವೇತ

Unknown said...

Hi,
Very good. Keep writing more & more. Really enjoyed reading.
Shweta

Unknown said...

Hello Mandara,

Kathe chennagide..good !!
Aadre ello ondu kade neevu ondu dharma ( and jaathi ) ivugalannu taken for granted anta annista ilwa ? ( idu nanna anisike ashte )

Susheel Sandeep said...

ಸಿಕಾಪಟ್ಟೆ ಸ್ಟ್ರಾಂಗ್ ಮೆಸೇಜ್ ಇರೋ ಕಥೆಯೊಂದನ್ನ ತುಂಬಾ ಚೆನ್ನಾಗಿ ಬರೆದಿದ್ದೀರಿ.ಸುಲಭವಾಗಿ ಓದಿಸಿಕೊಂಡು ಹೋಯ್ತು.
ನಿಮ್ಮ ಬರವಣಿಗೆಯನ್ನು ಪರಿಚಯಿಸಿದ್ದಕ್ಕಾಗೆ ಕನ್ನಡಪ್ರಭದ 'ಬ್ಲಾಗಾಯಣ'ಕ್ಕೆ ಒಂದು ಥ್ಯಾಂಕ್ಸ್.

ಅಂತರ್ವಾಣಿ said...

ಮಂದಾರ ಅವರೆ,
ಕಥೆ ಬಹಳ ಸುಂದರವಾಗಿದೆ.

Lakshmi Shashidhar Chaitanya said...

ಸತ್ಯ, ಧರ್ಮ, ನ್ಯಾಯ, ನೀತಿ ಎಲ್ಲಾ ಸಾಪೇಕ್ಷ(relative) ಅನ್ನೋದನ್ನ ತುಂಬಾ strong ಆಗಿ, straight ಆಗಿ, super ಆಗಿ ಬರ್ದಿದ್ದೀರ ಮಂದಾರ ಅವರೇ, ಕಥೆ ಅದ್ಭುತ.

ಬ್ಲಾಗ್ ಲೋಕಕ್ಕೆ ಸ್ವಾಗತ.

ಮನಸ್ವಿ said...

ಕಥೆ ನಿರೂಪಣಾ ಶೈಲಿ ತುಂಬಾ ಚನ್ನಾಗಿದೆ,ಇನ್ನೂ ಒಳ್ಳೊಳ್ಳೆ ಬರಹಗಳು ನಿಮ್ಮಿಂದ ಮೂಡಿಬರಲಿ

ranjith said...

ಮಂದಾರ,

ಸಿಕ್ಕಾಪಟ್ಟೆ ಸ್ಟ್ರಾಂಗ್ ಕತೆಯಿಂದಾನೇ ಶುರು ಮಾಡಿದೀರಿ. ಶೈಲಿ, ಓಘ, ಭಾವನೆಗಳ ಚಿತ್ರಣ, ನಿರೂಪಣೆ ಎಲ್ಲವೂ ಸೊಗಸಾಗಿದೆ...